ಇಂದು ಪ್ರೇಮಿಗಳ ದಿನ.. ಸಪ್ತಪದಿ ತುಳಿಯುತ್ತಿದ್ದಾರೆ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್

Milana Nagaraj and Darling Krishna Wedding | ಇಂದು ಕೃಷ್ಣ ಹಾಗೂ ಮಿಲನಾ ಮದುವೆ ಆಗುತ್ತಿದ್ದಾರೆ. ಈಗಾಗಲೇ ವಿವಾಹ ಪೂರ್ವ ಪೂಜಾ ಕಾರ್ಯಕ್ರಮಗಳ ಕುರಿತಾದ ಕೆಲ ಫೋಟೋ, ವಿಡಿಯೋಗಳು ವೈರಲ್​ ಆಗಿವೆ.

ಇಂದು ಪ್ರೇಮಿಗಳ ದಿನ.. ಸಪ್ತಪದಿ ತುಳಿಯುತ್ತಿದ್ದಾರೆ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್
Edited By:

Updated on: Feb 14, 2021 | 7:14 AM

ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಮದುವೆಯೇನೋ ಆಗುತ್ತಾರೆ. ಆದರೆ, ಕೊನೆಯಲ್ಲಿ ಮಿಲನಾ ಸತ್ತು ಹೋಗುತ್ತಾರೆ. ಈ ದೃಶ್ಯ ಅನೇಕರ ಕಣ್ಣಲ್ಲಿ ನೀರು ತರಿಸಿತ್ತು. ಹೀಗಿರುವಾಗಲೇ ಅಚ್ಚರಿಯ ವಿಚಾರವನ್ನು ಬಹಿರಂಗ ಮಾಡಿತ್ತು ಈ ಜೋಡಿ. ಅದೇನೆಂದರೆ, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದೇವೆ. ಶೀಘ್ರವೇ ಮದುವೆ ಕೂಡ ಆಗುತ್ತೇವೆ ಎಂದಿದ್ದರು. ಅಂತೆಯೇ, ಇಂದು ಪ್ರೇಮಿಗಳ ದಿನದ ಅಂಗವಾಗಿ (ಫೆ.14) ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಮದುವೆ ಆಗುತ್ತಿದ್ದಾರೆ.

ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಡಾರ್ಲಿಂಗ್‌ ಕೃಷ್ಣ ಮೊದಲ ಬಾರಿಗೆ ಲವ್‌ ಮಾಕ್‌ಟೇಲ್‌ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್ ನಡುವೆ ಪ್ರೀತಿ ಇರುವ ವಿಚಾರ ಬಹಿರಂಗವಾಗಿತ್ತು. 2015ರಲ್ಲಿ ತೆರೆಕಂಡ ಚಾರ್ಲಿ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣ ಲವ್‌ ಪ್ರಪೋಸ್‌ ಮಾಡಿದ್ದರಂತೆ. ಚಾರ್ಲಿ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್‌ ಮಾಡಿದ್ದರಂತೆ. ಮಿಲನಾ ಕೂಡ ಇವರ ಪ್ರಪೋಸ್​ ಒಪ್ಪಿಕೊಂಡಿದ್ದರು.

ಮಿಲನಾ ನಾಗರಾಜ್​ ಮದುವೆ

ಈಗಾಗಲೇ ವಿವಾಹ ಪೂರ್ವ ಪೂಜಾ ಕಾರ್ಯಕ್ರಮಗಳ ಕುರಿತಾದ ಕೆಲ ಫೋಟೋ, ವಿಡಿಯೋಗಳು ವೈರಲ್​ ಆಗಿವೆ. ಪ್ರೇಮಿಗಳ ದಿನಾಚರಣೆಯಂದೇ ಮದುವೆಯಾಗುವುದಾಗಿ ಇವರಿಬ್ಬರೂ ಕಳೆದ ವರ್ಷವೇ ಸುಳಿವು ನೀಡಿದ್ದರು. ನಂತರ ಅದು ಅಧಿಕೃತವಾಗಿ ಇದೀಗ ಅವರಿಬ್ಬರೂ ಒಂದಾಗುವ ಕಾಲ ಸನ್ನಿಹಿತವಾಗಿದೆ.

ಇದನ್ನೂ ಓದಿ: ಕೃಷ್ಣ Weds ಮಿಲನಾ ವೈರಲ್​ ಪಿಕ್ಸ್

ಬೆಂಗಳೂರಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9.30 ರಿಂದ 10.30ರ ಕಾಲದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ವಿವಾಹ ಕಾರ್ಯಕ್ರಮಕ್ಕೆ ಇವರಿಬ್ಬರೂ ಚಂದನವನದ ಅನೇಕ ನಟ, ನಟಿಯರನ್ನು ಆಹ್ವಾನಿಸಿದ್ದು, ಬಹುತೇಕರು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂತೆಯೇ, ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.