‘ಉರೀಗೌಡ, ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡಬೇಡಿ’; ಜೋರಾಯ್ತು ಆಗ್ರಹ

|

Updated on: Mar 18, 2023 | 12:56 PM

ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಇಲ್ಲ. ಇದರ ಮೇಲೆ ಸಿನಿಮಾ ಆಗಬಾರದು ಎಂದು ಒತ್ತಾಯಿಸಲಾಗಿದೆ.

‘ಉರೀಗೌಡ, ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡಬೇಡಿ’; ಜೋರಾಯ್ತು ಆಗ್ರಹ
ಮುನಿರತ್ನ
Follow us on

ಉರೀಗೌಡ, ನಂಜೆಗೌಡ ಬಗೆಗಿನ ಚರ್ಚೆ ಜೋರಾಗಿದೆ. ಇವರ ಜೀವನ ಆಧರಿಸಿ ನಿರ್ಮಾಪಕ ಮುನಿರತ್ನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಉರೀಗೌಡ-ನಂಜೇಗೌಡ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದರು. ವೃಷಭಾದ್ರಿ ಪ್ರೊಡಕ್ಷನ್ಸ್ (Vrushabhadri Productions) ಮೂಲಕ ಸಿನಿಮಾ ಮಾಡಲು ಅವರು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ, ಈ ಪಾತ್ರಗಳ ಮೇಲೆ ಸಿನಿಮಾ ಮಾಡಬಾರದು ಎಂದು ಈಗ ಅರ್ಜಿ ಸಲ್ಲಿಕೆ ಆಗಿದೆ. ಒಕ್ಕಲಿಗ ಯುವಬ್ರಿಗೆಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೆಡ್ ಅವರು ಈ ಕುರಿತು ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರೀಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಲ್ಲಿ ಇಲ್ಲ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ಪಟ್ಟಭದ್ರ ಹಿತಾಶಕ್ತಿಗಳು ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲು ಹಾಗೂ ಮುಸ್ಲಿಂ ಹಾಗೂ ಒಕ್ಕಲಿಗರ ನಡುವೆ ಧರ್ಮ ಸಂಘರ್ಷವನ್ನು ತಂದು ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ತಾವುಗಳು, ದಯಮಾಡಿ ಇದಕ್ಕೆ ಅವಕಾಶ ನೀಡದೆ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಒಕ್ಕಲಿಗ ಯುವಬ್ರಿಗೆಡ್ ಸಮುದಾಯದ ಯುವಕರಿಗೆ ಉದ್ಯೋಗ, ಶಿಕ್ಷಣವನ್ನು ನೀಡಲು ಸ್ಥಾಪಿತವಾದ ಸಂಸ್ಥೆಯಾಗಿದ್ದು, ಸುಮಾರು 13 ರಾಷ್ಟ್ರಗಳಲ್ಲಿ ಸಮುದಾಯ ಸಂಘಟಿಸುವುದರ ಜೊತೆಗೆ ಜನಾಂಗದ ಯುವಕರಿಗೆ ಅನ್ನ, ಶಿಕ್ಷಣ, ಉದ್ಯೋಗ ನೀಡುವುದರ ಮೂಲಕ ಕಾರ್ಯನಿರ್ವಹಿಸುತ್ತಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: HD Kumaraswamy: ಉರಿಗೌಡ ನಂಜೇಗೌಡ ಸಿನಿಮಾ ಮಾಡಿ ಒಕ್ಕಲಿಗರ ಗೌರವ ಮೂರಾಬಟ್ಟೆ ಮಾಡಲು ಹೊರಟಿದೆ ಬಿಜೆಪಿ; ಕುಮಾರಸ್ವಾಮಿ ಕಿಡಿ

ಸಿನಿಮಾ ಆಗುತ್ತಿರುವ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದರು. ‘ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ಉರೀಗೌಡ, ನಂಜೇಗೌಡ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ. ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 12:40 pm, Sat, 18 March 23