ಚೆನ್ನೈ: ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ 15 ವರ್ಷಗಳಿಂದಲೂ ಎದ್ದಿದ್ದ ಊಹಾಪೋಹದ ಸುದ್ದಿ ಇಂದು ತೆರೆಬಿದ್ದಿದೆ. ಚೆನ್ನೈನ ಲೀಲಾ ಪ್ಯಾಲೇಸ್ ಐಶಾರಾಮಿ ಹೋಟೆಲ್‌ನಲ್ಲಿ ಇದೀಗ ತಾನೇ ಸುದ್ದಿಗೋಷ್ಠಿ ನಡೆಸಿದ ಸೂಪರ್ಸ್ಟಾರ್, ತಮಿಳು ಚಿತ್ರಪ್ರೇಮಿಗಳ ಆರಾಧ್ಯದೈವ ರಜಿನಿಕಾಂತ್ ಅಧಿಕೃತವಾಗಿ ಖುದ್ದಾಗಿ ತಾವು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಘೋಷಿಸಿದರು.
ಆದ್ರೆ ಇಂದೂ ಪಕ್ಷದ ಹೆಸರು ಘೋಷಿಸದ ರಜಿನಿಕಾಂತ್, ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ತಿಳಿಸಿದರು. 1996ರಿಂದಲೂ ನನ್ನ ಹೆಸರು ರಾಜಕಾರಣದ ಜತೆ ಸೇರಿತ್ತು. 2017ರಲ್ಲಿ ನಾನು ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೆ. ಇದೀಗ ಅಧಿಕೃತವಾಗಿ ಜನರ ಸಮ್ಮುಖದಲ್ಲಿ ನನ್ನ ರಾಜಕೀಯ ಪ್ರವೇಶವನ್ನು ಘೋಷಿಸುತ್ತಿರುವುದಾಗಿ ನಟ ರಜಿನಿಕಾಂತ್ ಪ್ರಕಟಿಸಿದರು.
ಸಿಎಂ ಪದವಿಗಾಗಿ ಅಲ್ಲ, ಜನರ ಸೇವೆಗಾಗಿ ರಾಜಕೀಯಕ್ಕೆ ಎಂಟ್ರಿ:
48ನೇ ವಯಸ್ಸಿನಲ್ಲೇ ನಾನು ಪದವಿಗೆ ಆಸೆ ಪಡಲಿಲ್ಲ. ಇನ್ನು ಈಗ 70ನೇ ವಯಸ್ಸಿನಲ್ಲಿ ಪದವಿ ಬಯಸುತ್ತೀನಿ ಅಂದುಕೊಂಡಿದ್ದೀರಾ? ಎಂದು ತಾವು ಮುಖ್ಯಮಂತ್ರಿ ಪದವಿಗಾಗಿ ಅಲ್ಲ ಜನರ ಸೇವೆಗಾಗಿ ರಾಜಕೀಯಕ್ಕೆ ಬರುವುದಾಗಿ ರಜಿನಿ ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಹೇಳಿದರು.
ವ್ಯಕ್ತಿ ಕೇಂದ್ರಿತ ಸರ್ಕಾರ, ಪಕ್ಷದ ಪದ್ಧತಿ ಸರಿಯಿಲ್ಲ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಈ ವ್ಯವಸ್ಥೆಯನ್ನು ಬದಲಾಯಿಸುವುದೇ ನಮ್ಮ ಉದ್ದೇಶವಾಗಿದೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲ ವ್ಯರ್ಥ ಮಾಡುವುದಿಲ್ಲ. ಪಕ್ಷದಲ್ಲಿ ಯುವಕರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಅಗತ್ಯವಿದೆ ಎಂದರು.
ನನಗೆ, ನಾನು, ನನ್ನದು ಎಂಬುದಕ್ಕೆ ಶಕ್ತಿ ಇರುವುದಿಲ್ಲ. ಆದ್ರೆ ನಿಸ್ವಾರ್ಥಸೇವೆಗೆ ಎಲ್ಲಾ ಅಧಿಕಾರವೂ ಕೂಡಿ ಬರುತ್ತದೆ ಎಂದು ರಜಿನಿ ಮಾರ್ಮಿಕವಾಗಿ ಹೇಳಿದರು. ಇದು ಜನಾಂದೋಲನವಾಗಿ ಪರಿವರ್ತನೆಯಾಗಬೇಕು. ಚಳವಳಿಯಾಗಿ ರೂಪುಗೊಳ್ಳಬೇಕು, ಆಗಲೇ ಜನ ಚೆನ್ನಾಗಿ ಇರಬಲ್ಲರು ಎಂದರು. 2021ರ ಮೇ ನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಹೀಗಾಗಿ ತಮಿಳು ಚಿತ್ರಪ್ರೇಮಿಗಳ ಆರಾಧ್ಯದೈವ ರಜಿನಿಕಾಂತ್ ಕೊನೆಗೂ, ರಾಜಕೀಯ ಎಂಟ್ರಿ ಘೋಷಿಸಿದರು.
Published On - 11:19 am, Thu, 12 March 20