ಚಿತ್ರರಂಗದಲ್ಲಿ ಭಾಷೆಗಳ ನಡುವೆ ಗಡಿ ಸಣ್ಣದಾಗಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಚಾಲ್ತಿಗೆ ಬಂದ ಬಳಿಕ ಅಂಥ ಪ್ರಯತ್ನಗಳು ಜಾಸ್ತಿ ಆಗಿವೆ. ಈಗ ಕನ್ನಡ ಮತ್ತು ತೆಲುಗಿನಲ್ಲಿ ಒಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಕನ್ನಡದಲ್ಲಿ ‘ಯಾಕೆ’ ಎಂದು ಶೀರ್ಷಿಕೆ ಇಡಲಾಗಿದೆ. ತೆಲುಗಿನಲ್ಲಿ ಇದೇ ಸಿನಿಮಾಗೆ ‘ಸಂಸ್ಥಾನಂ’ ಎಂದು ಟೈಟಲ್ ಇಡಲಾಗಿದೆ. ಪ್ರೇಮ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸೀತಾ ಹರ್ಷವರ್ಧನ್ ಅವರು ಎರಡೂ ಭಾಷೆಗಳಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು.
ಶೀರ್ಷಿಕೆ ಅನಾವರಣದ ಜೊತೆ ‘ಸಿರಿ ಸಿನಿಮಾಸ್’ ಪ್ರೊಡಕ್ಷನ್ ಹೌಸ್ ಉದ್ಘಾಟನೆ ಕೂಡ ನಡೆಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಈ ಕಾರ್ಯಕ್ರಮ ಮಾಡಲಾಯಿತು. ಒರಟ ಪ್ರಶಾಂತ್, ನಿರ್ಮಾಪಕ ಟಿಪಿ ಸಿದ್ದರಾಜು, ಶ್ರೀನಗರ ಕಿಟ್ಟಿ, ಅಂಬುಜಾ ಮುಂತಾದವರು ಬಂದು ಟೈಟಲ್ ಅನಾವರಣ ಮಾಡಿದರು. ಅಲ್ಲದೇ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಎಂದರು.
ಕಾರ್ಯಕ್ರಮದಲ್ಲಿ ನಿರ್ಮಾಪಕಿ ಸೀತಾ ಹರ್ಷವರ್ಧನ್ ಅವರು ಮಾತನಾಡಿದರು. ‘ನಾನು ಕನ್ನಡದ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ತೆಲುಗು ಸೀರಿಯಲ್ಗಳಲ್ಲೂ ನಟಿಸಿದ್ದೇನೆ. ನಿರ್ದೇಶಕ ಪ್ರೇಮ್ ಅವರು ಒಮ್ಮೆ ಹೇಳಿದ ಈ ಕಥೆ ನನಗೆ ಇಷ್ಟವಾಯ್ತು. ಆದ್ದರಿಂದ ನಿರ್ಮಾಣ ಮಾಡಲು ಮುಂದಾಗಿದ್ದೇನೆ. ನಮ್ಮ ಪ್ರಯತ್ನಕ್ಕೆ ಅಮೇಜಾನ್ ಮತ್ತು ಹೈದರಾಬಾದ್ನ ಖುಷಿ ಸಿನಿಮಾ ಸಂಸ್ಥೆ ಸಾಥ್ ನೀಡಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ದಿನ ನಡೆಯಲ್ಲ: ಹೀಗೆಂದರೇಕೆ ಅಲ್ಲು ಅರ್ಜುನ್ ತಂದೆ
ನವೆಂಬರ್ನಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. 2025ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ‘ಯಾಕೆ’ ಸಿನಿಮಾದ ಡೈರೆಕ್ಟರ್ ಪ್ರೇಮ್ ಮಾತನಾಡಿ, ‘ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಇದರಲ್ಲಿ ಉತ್ತಮವಾದ ಕಥಾವಸ್ತು ಇದೆ. ಅದು ಎಲ್ಲರಿಗೂ ಇಷ್ಟ ಆಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೆ ‘ಖುಷಿ ಸಿನಿಮಾಸ್’ ಸಂಸ್ಥೆಯ ಪಾಲುದಾರರು ಈ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.