
ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ವಾಹಿನಿಗಳಲ್ಲಿಯೂ ಸಹ ಚರ್ಚೆ ನಡೆಯುತ್ತಿದೆ. ಇದೀಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಾಲಿವುಡ್ ಮಾದರಿಯಲ್ಲಿದೆ. ಮೂರು ನಿಮಿಷವೂ ಇಲ್ಲದ ಈ ಟೀಸರ್ ಅನ್ನು ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿದ್ದಾರೆ. ಟೀಸರ್ನಲ್ಲಿರುವ ಹಾಟ್ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.
ಇದು ಹೀಗಿರುವಾಗ, ಟೀಸರ್ನಲ್ಲಿ ಯಶ್ ಜೊತೆ ಕಾರಿನಲ್ಲಿರುವ ಯುವತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ನೆಟ್ಟಿಗರು ಮಾಡಿದ್ದಾರೆ. ಬಹುತೇಕರು, ‘ಟಾಕ್ಸಿಕ್’ ಟೀಸರ್ನಲ್ಲಿ ಯಶ್ ಜೊತೆಗಿರುವ ಯುವತಿ ನಟಿ ನಟೇಲಾ ಬರ್ನ್ ಎನ್ನಲಾಗಿತ್ತು. ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಂಚಿಕೊಂಡಿದ್ದರು. ಅಲ್ಲದೆ, ಅವರ ವಿಕಿಪೀಡಿಯಾ ಪೇಜ್ನಲ್ಲಿಯೂ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ಇತ್ತು. ಇದೇ ಕಾರಣಕ್ಕೆ ಎಲ್ಲರೂ ‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ಯಶ್ ಜೊತೆಗೆ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡಿರುವ ವಿದೇಶಿ ನಟಿ ನಟೇಲಿ ಬರ್ನ್ ಎಂದುಕೊಂಡಿದ್ದರು.
ಆದರೆ ಇದನ್ನು ಗಮನಿಸಿದ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ಟೀಸರ್ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನ)ದ ಹುಡುಗಿ’ ಎಂದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯನ್ನು ಸಹ ಗೀತು ಮೋಹನ್ದಾಸ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ
ನಟಿ ಬಿಯಾತ್ರೀಜ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನಟಿಯ ಇನ್ಸ್ಟಾಗ್ರಾಂ ಖಾತೆ ಸಹ ಲಾಕ್ ಆಗಿದೆ. ಆದರೆ ‘ಟೀಸರ್’ ಬಿಡುಗಡೆ ಆಗುವ ಮುಂಚೆ ಬಿಯಾತ್ರೀಜ್ ಅವರ ಇನ್ಸ್ಟಾಗ್ರಾಂನಲ್ಲಿ ಕೇವಲ 1800 ಮಂದಿ ಫಾಲೋವರ್ಗಳು ಇದ್ದರು. ಆದರೆ ಟೀಸರ್ ಬಿಡುಗಡೆ ಆದ ಬಳಿಕ ಇದು ಲಕ್ಷಗಳಲ್ಲಿ ಹೆಚ್ಚಾಗಿರುವುದಂತೂ ಖಾತ್ರಿ. ಆದರೆ ಅವರ ಇನ್ಸ್ಟಾಗ್ರಾಂ ಪ್ರೈವೇಟ್ ಆಗಿರುವ ಕಾರಣ ಆಯ್ದ ಕೆಲವರಿಗಷ್ಟೆ ಅವರ ಫೋಟೊಗಳು, ಫಾಲೋವರ್ಗಳ ಸಂಖ್ಯೆ ತಿಳಿಯಲಿದೆ.
‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ನಾಯಕರಾದರೂ ನಾಯಕಿಯ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದಂತಿದೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ