ಎಲ್ಲ ಭಾಷೆಯ ಜನರಿಗೂ ಬೆಂಗಳೂರು ಆಶ್ರಯ ನೀಡಿದೆ. ಪರರಾಜ್ಯದ ಜನರು ಮಾತ್ರವಲ್ಲದೆ ವಿದೇಶಿಗರು ಕೂಡ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಎಲ್ಲರನ್ನೂ ಸ್ವಾಗತಿಸುವುದು ಕನ್ನಡಿಗರ ಗುಣ. ಪರ ಊರಿನವರ ಭಾಷೆ, ಸಂಸ್ಕೃತಿಯನ್ನು ಕರುನಾಡು ಗೌರವಿಸುತ್ತದೆ. ಆದರೆ ಇಲ್ಲಿಗೆ ಬಂದು ನೆಲೆಕಂಡುಕೊಂಡ ಮೇಲೆ ಪರಭಾಷೆ ಮಂದಿ ಅದೇಕೋ ಗೊತ್ತಿಲ್ಲ ಕನ್ನಡವನ್ನೇ ಕಡೆಗಣಿಸುತ್ತಾರೆ. ಕನ್ನಡ ಹಾಡುಗಳು ಎಂದರೆ ಮೂಗು ಮುರಿಯುತ್ತಾರೆ. ಪಬ್‌ಗಳಲ್ಲಿ ಕನ್ನಡ ಹಾಡು ಹಾಕಿ ಎಂದು ಕೇಳಿದರೆ ಅಸಡ್ಡೆ ಮಾಡುತ್ತಾರೆ. ಅದರ ವಿರುದ್ಧ ಆನ್ಲೈನ್ನಲ್ಲಿ ಆರಂಭ ಆಗಿರುವ ಹೋರಾಟಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರಿನ ಪಬ್‌ಗಳಲ್ಲಿ ಮನವಿ ಮಾಡಿಕೊಂಡರೂ ಕೂಡ ಕನ್ನಡ ಹಾಡುಗಳನ್ನು ಹಾಕುವುದಿಲ್ಲ ಎಂದು ರ‍್ಯಾಪ್ ಗಾಯಕರಾದ ಅಲೋಕ್ ಬಾಬು, ಚಂದನ್ ಶೆಟ್ಟಿ ಮುಂತಾದವರು ಅಸಮಾಧಾನ ಹೊರಹಾಕಿದ್ದಾರೆ. ಪಬ್ನವರ ಈ ವರ್ತನೆ ವಿರುದ್ಧ ಗಾಯಕ ಅಲೋಕ್ ಬಾಬು (ಆಲ್ ಓಕೆ) ಇತ್ತೀಚೆಗೆ ಆನ್ಲೈನ್ ಅಭಿಯಾನ ಕೂಡ ಶುರು ಮಾಡಿದ್ದರು. Change.org ಮೂಲಕ ಸಹಿ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈವರೆಗೂ ಈ ಸಹಿ ಸಂಗ್ರಹದಲ್ಲಿ ಎಷ್ಟು ಜನ ಭಾಗಿ ಆಗಿದ್ದಾರೆ? ಪಬ್‌ಗಳಲ್ಲಿ ಕನ್ನಡ ಹಾಡು ಬೇಕು ಎಂಬುದಕ್ಕೆ ಎಷ್ಟು ಮಂದಿ ಸಮ್ಮತಿ ನೀಡಿದ್ದಾರೆ? 80 ಸಾವಿರಕ್ಕೂ ಹೆಚ್ಚು! ಹೌದು, Change.org ವೆಬ್ಸೈಟ್ನಲ್ಲಿ ಮಾ.21ರ ಬೆಳಗ್ಗೆ 9.25ರವರೆಗೆ 81,921 ಜನರು ಸಹಿ ಮಾಡಿದ್ದು, ಬೆಂಗಳೂರಿನ ಪಬ್‌ಗಳಲ್ಲಿ ಕನ್ನಡ ಸಾಂಗ್ಸ್ ಪ್ಲೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಹಾಡುಗಳಿಗೆ ಡಿಮ್ಯಾಂಡ್ ಇದೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಪಬ್ ಮಾಲೀಕರು ಕನ್ನಡದ ಗೀತೆಗಳನ್ನು ಕಡೆಗಣಿಸುವ ಕಾಲ ಇನ್ನಾದರೂ ಕೊನೆಯಾಗಲಿದೆ ಎಂಬ ಭರವಸೆ ಮೂಡುತ್ತಿದೆ.
ಕನ್ನಡದ ಆಲ್ಬಂ ಗೀತೆಗಳು ಮಾತ್ರವಲ್ಲದೆ, ಸಿನಿಮಾ ಹಾಡುಗಳಿಗೂ ಪಬ್‌ಗಳಲ್ಲಿ ಬೇಡಿಕೆ ಇದೆ. ಅನೇಕ ಹಾಡುಗಳು ಸೂಪರ್ ಹಿಟ್ ಆಗುತ್ತಿವೆ. ಗ್ರಾಹಕರು ಮನವಿ ಮಾಡಿಕೊಂಡರೂ ಕೂಡ ಕನ್ನಡ ಸಾಂಗ್ ಪ್ಲೇ ಮಾಡದೇ ಇರುವುದು ಕನ್ನಡಿಗರ ಕೋಪಕ್ಕೆ ಕಾರಣ ಆಗಿರುವ ವಿಚಾರ. ಇದನ್ನು ಮನದಟ್ಟು ಮಾಡಿಸಲು ಕೆಲವು ದಿನಗಳ ಹಿಂದೆ ಚಂದನ್ ಶೆಟ್ಟಿ ಅವರು ಒಂದು ವಿಡಿಯೋ ಮೂಲಕ ಸಾಕ್ಷಿ ಒದಗಿಸಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾ ಮೂಲಕ ಹೋರಾಟ ಆರಂಭಿಸಿದ್ದರು.
ಇದನ್ನೂ ಓದಿ: ‘ಪಬ್‌ಗಳಲ್ಲಿ ಕನ್ನಡ ಹಾಡು ಹಾಕೋದಿಲ್ಲ, ಅಸಲಿಗೆ ಅವ್ರೆಲ್ಲ ಕನ್ನಡದವ್ರೇ ಅಲ್ಲ.. ಆದ್ರೂ ಪಬ್ ನಡೆಸೋಕೆ ಇಲ್ಲಿ ಜಾಗ ಬೇಕು’
Published On - 9:23 am, Sun, 21 March 21