ದರ್ಶನ್ ಪ್ರಕರಣವಾದ ಬಳಿಕ ‘ಪ್ರಕರಣ ತನಿಖಾ ಹಂತದಲ್ಲಿದೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಲೇ ಇರುತ್ತೇವೆ. ದರ್ಶನ್ ಮಾತ್ರವಲ್ಲ ಬಹುತೇಕ ಮಾಧ್ಯಮಗಳು, ವಕೀಲರು ಯಾವುದಾದರೂ ಪ್ರಕರಣವನ್ನು ವಿಶ್ಲೇಷಿಸುವಾಗ ಬಳಸುವ ಸಾಮಾನ್ಯ ಸಾಲು ‘ಪ್ರಕರಣ ತನಿಖಾ ಹಂತದಲ್ಲಿದೆ’ ಇದೀಗ ಇದೇ ಸಾಲನ್ನು ಇರಿಸಿಕೊಂಡು ಸಿನಿಮಾ ಮಾಡಲಾಗಿದೆ. ಹೆಸರೇ ಹೇಳುತ್ತಿರುವಂತೆ ಇದೊಂದು ತನಿಖೆ ನಡೆಯುತ್ತಿರುವ ಪ್ರಕರಣ ಕುರಿತಾದ ಸಿನಿಮಾ. ಹಲವು ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದು, ರಂಗಭೂಮಿ ನಟರ ಪ್ರಯೋಗವೆಂದೇ ಹೇಳಬಹುದು. ಈ ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾದ ಮೋಷನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಈಗಾಗಲೇ ಬಿಡುಗಡೆ ಆಗಿದ್ದು, ಒಂದು ಹಂತಕ್ಕೆ ಕುತೂಹಲ ಕೆರಳಿಸಲು ಯಶಸ್ವಿಯಾಗಿದೆ. ಇದೀಗ ಟ್ರೈಲರ್ ಬಿಡುಗಡೆ ಆಗಿದೆ. ಮಾಧ್ಯಮದವರ ಮುಂದೆ ಟ್ರೈಲರ್ ಅನ್ನು ಚಿತ್ರತಂಡ ಅನಾವರಣ ಗೊಳಿಸಿದೆ. ಟ್ರೈಲರ್ಗೆ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೇ ಬಂದಿದೆ. ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಹಾಜರಿದ್ದು ಸಿನಿಮಾದ ಬಗ್ಗೆ ಕೆಲ ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದೆ.
ಇದನ್ನೂ ಓದಿ:ರಜನೀಕಾಂತ್ ‘ವೆಟ್ಟೆಯಾನ್’ ಟ್ರೈಲರ್ ಬಿಡುಗಡೆ, ಧಂ ಇಲ್ಲ ಎಂದ ಫ್ಯಾನ್ಸ್
ಚಿಂತನ್ ಕಂಬಣ್ಣ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರ ತಂದೆ ಡಾ ಶಿವಣ್ಣ ಕೆ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶಿವಣ್ಣ ಅವರೇ ಈ ಸಿನಿಮಾದ ಕೆಲ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಶಿವಣ್ಣ ಬರೆದಿರುವ ಸಾಹಿತ್ಯವುಳ್ಳ ಮೊದಲ ಹಾಡು ಈಗಾಗಲೇ ಬಿಡುಗಡೆ ಸಹ ಆಗಿದೆ. ಆ ಬಳಿಕ ನಿರ್ಮಾಪಕ ಚಿಂತನ್ ಕಂಬಣ್ಣ ತಾವು ಈ ಚಿತ್ರದ ಭಾಗವಾದ ಬಗ್ಗೆ ಮಾತಾಡಿದ್ದಾರೆ. ಚಿಂತನ್ ನಟನೆಯತ್ತ ಆಕರ್ಷಿತರಾಗಿ ರಂಗತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್ ಎಸ್ ಮತ್ತು ತಂಡದ ಪರಿಚಯವಾಗಿತ್ತಂತೆ. ಆ ಹಂತದಲ್ಲಿ ಸುಂದರ್ ಎಸ್ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇಷ್ಟವಾಗಿ, ಅದನ್ನು ತಾನೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಚಿಂತನ್ ಹೇಳಿಕೊಂಡಿದ್ದಾರೆ.
ಸಿನಿಮಾದ ನಿರ್ದೇಶಕ ಸುಂದರ್ ಎಸ್ ಮಾತನಾಡಿ, ‘ಈ ತಂಡದಲ್ಲಿರುವ ಎಲ್ಲರೂ ರಂಗಭೂಮಿ ಹಿನ್ನೆಲೆಯವರು. ನಾಟಕಗಳ ಜೊತೆಗೆ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಇವರೆಲ್ಲರೂ ನಾನಾ ಕಥೆಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು. ಕಡೆಗೂ ಕಥೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಾಗ ಈಗಿರುವ ಟ್ರೆಂಡಿಗೆ ಸುಂದರ್ ಎಸ್ ಅವರ ಕಥೆ ಸರಿ ಹೊಂದುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ನಂತರ ನಿರ್ಮಾಪಕರನ್ನು ಹುಡುಕುವ ಕೆಲಸದ ನಡುವೆ ಚಿಂತನ್ ಕಂಬಣ್ಣ ತಾನೇ ನಿರ್ಮಾಣ ಮಾಡುವುದಾಗಿ ಮುಂದೆ ಬಂದರು. ಇದೆಲ್ಲದರಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ ಎಂದರು. ಸಿನಿಮಾ ಅಕ್ಟೋಬರ್ 10ಕ್ಕೆ ತೆರೆಗೆ ಬರಲಿದೆ.
ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು. ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಗೆ ಪ್ರೇಕ್ಷಕರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ