ರಜನೀಕಾಂತ್ ‘ವೆಟ್ಟೆಯಾನ್’ ಟ್ರೈಲರ್ ಬಿಡುಗಡೆ, ಧಂ ಇಲ್ಲ ಎಂದ ಫ್ಯಾನ್ಸ್

Vettaiyan: ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಹಲವರು ನಟಿಸಿದ್ದಾರೆ.

ರಜನೀಕಾಂತ್ ‘ವೆಟ್ಟೆಯಾನ್’ ಟ್ರೈಲರ್ ಬಿಡುಗಡೆ, ಧಂ ಇಲ್ಲ ಎಂದ ಫ್ಯಾನ್ಸ್
Follow us
ಮಂಜುನಾಥ ಸಿ.
|

Updated on: Sep 20, 2024 | 8:21 PM

ರಜನೀಕಾಂತ್ ನಟನೆಯ ಈ ಹಿಂದಿನ ಮಾಸ್ ಸಿನಿಮಾ ‘ಜೈಲರ್’ ದೊಡ್ಡ ಹಿಟ್ ಆಯ್ತು. ಸಿನಿಮಾದಲ್ಲಿ ನಿವೃತ್ತ ಜೈಲರ್ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದರು. ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಸಮವಸ್ತ್ರ ಧರಿಸಿದ್ದ ದೃಶ್ಯಗಳು ಸಹ ಇದ್ದವು. ಇದೀಗ ರಜನೀಕಾಂತ್ ನಟನೆಯ ‘ವೆಟ್ಟಯಾನ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ರಜನೀಕಾಂತ್ ಮತ್ತೊಮ್ಮೆ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕತೆಯ ಬಗ್ಗೆ ಕೆಲವು ಅಂಶಗಳನ್ನು ಈ ಟೀಸರ್ ಬಿಟ್ಟುಕೊಡುತ್ತಿದೆಯಾದರೂ ಟ್ರೈಲರ್ ನಲ್ಲಿ ಏನೋ ಕೊರತೆ ಇದೆ ಎಂಬಂತೆ ಅನಿಸುತ್ತಿದೆ.

‘ವೆಟ್ಟೆಯಾನ್’ ಸಿನಿಮಾನಲ್ಲಿ ರಜನೀಕಾಂತ್, ಎನ್​ಕೌಂಟರ್ ತಜ್ಞ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಪಾಯಕಾರಿ ಭೂಗತ ಪಾತಕಿಗಳ ಪಾಲಿಗೆ ಯಮ ಎನಿಸಿಕೊಂಡಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಪಾತ್ರ ಎನ್​ಕೌಂಟರ್ ವಿರೋಧಿ, ಎನ್​ಕೌಂಟರ್ ಎಂಬುದು ಪೊಲೀಸರು ಜನರ ಮುಂದೆ ಹೀರೋಗಳಾಗಲು ಬಳಸುವ ಆಯುಧ ಎಂಬುದು ಅವರ ವಾದ. ಸರಣಿ ಎನ್​ಕೌಂಟರ್ ಮಾಡಿರುವ, ರಜನೀಕಾಂತ್ ಅನ್ನು ಬಚ್ಚನ್ ಪಾತ್ರ ಕಟಕಟೆಯಲ್ಲಿ ನಿಲ್ಲಿಸಿದೆ. ಇದು ಒನ್​ಲೈನ್ ಸ್ಟೋರಿ ಎಂಬುದು ಟ್ರೈಲರ್​ನಿಂದ ಅರ್ಥವಾಗುತ್ತಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಪಾತ್ರಗಳು ಸಹ ಕಾಣಿಸುತ್ತವೆ. ಆದರೆ ಆ ಎರಡು ಪಾತ್ರಗಳು ವಿಲನ್ ಆಗಿರುವಂತೆ ತೋರುತ್ತಿವೆ. ಫಹಾದ್ ಫಾಸಿಲ್ ಅಂತೂ ಅವರ ‘ಕುಂಬಳಂಗಿ ನೈಟ್ಸ್’ ಸಿನಿಮಾದ ಶಮಿ ಪಾತ್ರದ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಸೂಟು ಬೂಟು ಧರಿಸಿ ಕಾರ್ಪೊರೇಟ್ ವಿಲನ್ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನು ಟೀಸರ್​ನಲ್ಲಿ ನಿಮಿಷಾ ಸಜಯನ್, ಮಂಜು ವಾರಿಯರ್, ರೋಹಿಣಿ, ಕನ್ನಡಿಗ ಕಿಶೋರ್, ರಾವ್ ರಮೇಶ್ ಇನ್ನಿತರರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಶಿವಣ್ಣನ ಬಳಿಕ ರಜನೀಕಾಂತ್ ಜೊತೆ ನಟಿಸಲಿದ್ದಾರೆ ಕನ್ನಡದ ಮತ್ತೊಬ್ಬ ಸ್ಟಾರ್ ನಟ

‘ವೆಟ್ಟೆಯಾನ್’ ಸಿನಿಮಾವನ್ನು ಟಿಜೆ ಜ್ಞಾನವೇಲು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಆಸ್ಕರ್​ಗೆ ಕಳಿಸಲಾಗಿದ್ದ ‘ಜೈ ಭೀಮ್’ ಸಿನಿಮಾವನ್ನು ಇವರು ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ