‘ಪ್ರೇಮದ ಊರಲಿ’ ಗಲ್ಲಾಪೆಟ್ಟಿಗೆಯಲ್ಲಿ ಜಾದೂ; ಎರಡನೇ ಸೋಮವಾರವೂ ಭರ್ಜರಿ ಗಳಿಕೆ

ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸತತ ಯಶಸ್ಸು ಕಾಣುತ್ತಿದ್ದು, 11ನೇ ದಿನದ ಸೋಮವಾರವೂ 3.00 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.44 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಸಾಧಿಸಿರುವ ಚಿತ್ರವು ಕೆಲಸದ ದಿನಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ಸೂಪರ್ ಹಿಟ್ ಎನಿಸಿಕೊಂಡಿದೆ. -

‘ಪ್ರೇಮದ ಊರಲಿ’ ಗಲ್ಲಾಪೆಟ್ಟಿಗೆಯಲ್ಲಿ ಜಾದೂ; ಎರಡನೇ ಸೋಮವಾರವೂ ಭರ್ಜರಿ ಗಳಿಕೆ
ಪ್ರೇಮದ ಊರಲಿ

Updated on: Oct 06, 2026 | 9:05 AM

ಮುಖ್ಯಾಂಶಗಳು

  • ಮೊದಲ ವಾರಕ್ಕಿಂತ ಎರಡನೇ ವಾರವೇ ಡಬಲ್ ಧಮಾಕಾ
  • ಸೋಮವಾರದ ಪರೀಕ್ಷೆಯಲ್ಲೂ ಫುಲ್ ಮಾರ್ಕ್ಸ್
  • 11ನೇ ದಿನವೂ 3 ಕೋಟಿ ಬಾಚಿದ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ತೆರೆಕಂಡ ‘ಪ್ರೇಮದ ಊರಲಿ’ ಸಿನಿಮಾ ದಿನದಿಂದ ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಾ ಅಭೂತಪೂರ್ವ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಆರಂಭದ ದಿನಗಳಲ್ಲಿ ಸಣ್ಣ ಮಟ್ಟದ ಗಳಿಕೆ ಕಂಡಿದ್ದ ಈ ಚಿತ್ರ, ಪ್ರೇಕ್ಷಕರ ಅತ್ಯುತ್ತಮ ಮೌಖಿಕ ಪ್ರಚಾರದಿಂದಾಗಿದಿನ ಕಳೆದಂತೆ ದೊಡ್ಡ ಮಟ್ಟದ ಸದ್ದು ಮಾಡಲು ಪ್ರಾರಂಭಿಸಿತು. ವಾರಾಂತ್ಯದಲ್ಲಿ ಮಳೆಹೊಯ್ದಂತೆ ಹರಿದುಬಂದ ಹಣ, ಈಗ ವಾರದ ಕೆಲಸದ ದಿನಗಳಲ್ಲೂ ಅಷ್ಟೇ ಭರ್ಜರಿಯಾಗಿ ಹರಿದುಬರುತ್ತಿದೆ.

ಸೆಪ್ಟೆಂಬರ್ 25ರ ಶುಕ್ರವಾರ ಕೇವಲ 9 ಲಕ್ಷ ರೂಪಾಯಿ ಗಳಿಕೆಯೊಂದಿಗೆ 60 ಶೋಗಳಲ್ಲಿ ತೀರಾ ಸರಳವಾಗಿ ಪ್ರಯಾಣ ಆರಂಭಿಸಿದ್ದ ಈ ಸಿನಿಮಾ, ಮೊದಲ ವಾರಾಂತ್ಯದ ವೇಳೆಗೆ ಅಂದರೆ ಭಾನುವಾರಕ್ಕೆ ₹55 ಲಕ್ಷ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿತು. ನಂತರ ಬಂದ ಸೋಮವಾರದಿಂದ ಗುರುವಾರದವರೆಗೆ ಪ್ರತಿದಿನವೂ ಕಲೆಕ್ಷನ್‌ ಏರಿಕೆಯಾಗುತ್ತಲೇ ಸಾಗಿತು. ಮೊದಲ ವಾರದ ಅಂತ್ಯಕ್ಕೆ ಈ ಚಿತ್ರ ಒಟ್ಟು 5.32 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಸಾಧಿಸಿ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಭರವಸೆ ನೀಡಿತ್ತು.

ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಈ ಚಿತ್ರದ ಕ್ರೇಜ್‌ ಮುಗಿಲು ಮುಟ್ಟಿತ್ತು. ಅಕ್ಟೋಬರ್ 2ರ ಗಾಂಧಿ ಜಯಂತಿಯ ರಜಾದಿನದಿಂದ ಹಿಡಿದು ಭಾನುವಾರದವರೆಗೆ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಂಡವು. ಅಕ್ಟೋಬರ್ 4ರ ಭಾನುವಾರ ಒಂದೇ ದಿನ ಈ ಸಿನಿಮಾ ₹3.85 ಕೋಟಿ ಬಾರಿಸುವ ಮೂಲಕ ಬಾಕ್ಸ್ ಆಫೀಸ್ ಸೂರೆಗೊಂಡಿತು. ಈ ಮೂಲಕ ಎರಡನೇ ವಾರಾಂತ್ಯದಲ್ಲಿ ಚಿತ್ರದ ಪ್ರದರ್ಶನಗಳ ಸಂಖ್ಯೆ ಹಾಗೂ ಶೋಗಳ ಆಕ್ಯುಪೆನ್ಸಿ ಶೇಕಡಾ 80ಕ್ಕಿಂತಲೂ ಹೆಚ್ಚು ದಾಖಲಾಗಿತ್ತು.

ಸಾಮಾನ್ಯವಾಗಿ ವಾರಾಂತ್ಯದ ನಂತರ ಬರುವ ಸೋಮವಾರದ ಕಲೆಕ್ಷನ್ ಸಿನಿಮಾದ ನಿಜವಾದ ಸಫಲತೆಯನ್ನು ನಿರ್ಧರಿಸುತ್ತದೆ. ಆ ಪರೀಕ್ಷೆಯಲ್ಲೂ ‘ಪ್ರೇಮದ ಊರಲಿ’ ಚಿತ್ರ ಅತ್ಯಂತ ಸುಲಭವಾಗಿ ಪಾಸ್ ಆಗಿದೆ. 11ನೇ ದಿನವಾದ ಅಕ್ಟೋಬರ್ 5ರ ಸೋಮವಾರದಂದು 673 ಶೋಗಳಲ್ಲಿ ಶೇಕಡಾ 69ರಷ್ಟು ಆಕ್ಯುಪೆನ್ಸಿ ಕಾಣುವ ಮೂಲಕ 3.00 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ. ಎರಡನೇ ಸೋಮವಾರವೂ ಇಷ್ಟೊಂದು ದೊಡ್ಡ ಮಟ್ಟದ ಗಳಿಕೆ ಮಾಡಿರುವುದು ಪ್ರೇಕ್ಷಕರು ಈ ಚಿತ್ರವನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ‘ಪ್ರೇಮದ ಊರಲಿ’ ಚಿತ್ರದಲ್ಲಿ ನಟಿಸಬೇಕಿತ್ತು ರುಕ್ಮಿಣಿ ವಸಂತ್; ಯೋಜನೆ ಕೈ ಬಿಟ್ಟಿದ್ದೇಕೆ?

ಈ ಭರ್ಜರಿ ಗಳಿಕೆಯೊಂದಿಗೆ ‘ಪ್ರೇಮದ ಊರಲ್ಲಿ’ ಸಿನಿಮಾ 11 ದಿನಗಳಲ್ಲಿ ಭಾರತಾದ್ಯಂತ ಒಟ್ಟು 17.57 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಒಟ್ಟು ಗ್ರಾಸ್ ಗಳಿಕೆ ನೋಡುವುದಾದರೆ ಪ್ರಸ್ತುತ 20.44 ಕೋಟಿ ಗಡಿದಾಟಿದೆ. ಕೆಲಸದ ದಿನಗಳಲ್ಲೂ ಶೋಗಳು ಹೌಸ್‌ಫುಲ್ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಹೊಸ ದಾಖಲೆಗಳನ್ನು ನಿರ್ಮಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us