
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ಚಂದನವನದಲ್ಲಿ ಭಾರಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಲಾವಿದರ ಅಭಿನಯ ಮತ್ತು ಬಲವಾದ ಕಥಾಹಂದರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಚಿತ್ರವು ಬಿಡುಗಡೆಯಾದ ಆರು ದಿನಗಳಲ್ಲಿ ಹಂತ ಹಂತವಾಗಿ ತನ್ನ ಶೋ ಹಾಗೂ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಆಶ್ಚರ್ಯಕರ ರೀತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ.
ಚಿತ್ರವು ಮೊದಲ ದಿನ 60 ಪ್ರದರ್ಶನಗಳಿಂದ ಕೇವಲ 13 ಲಕ್ಷ ರೂಪಾಯಿ ಗಳಿಸಿ ಮೆಲ್ಲನೆ ಖಾತೆ ತೆರೆದಿತ್ತು. ಶನಿವಾರ ಮತ್ತು ಭಾನುವಾರ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಗಳಿಕೆ ಅನುಕ್ರಮವಾಗಿ 33 ಲಕ್ಷ ಹಾಗೂ 81 ಲಕ್ಷ ರೂಪಾಯಿಗೆ ಏರಿಕೆಯಾಯಿತು. ಸೋಮವಾರ ಮತ್ತು ಮಂಗಳವಾರವೂ ಸಹ ಪ್ರೇಕ್ಷಕರ ಉತ್ತಮ ಬೆಂಬಲ ವ್ಯಕ್ತವಾಗಿ ಅನುಕ್ರಮವಾಗಿ 95 ಲಕ್ಷ ಮತ್ತು 1.41 ಕೋಟಿ ರೂಪಾಯಿ ಬಾಚಿಕೊಂಡಿತು.
ಆರನೇ ದಿನವಾದ ಬುಧವಾರ ಚಿತ್ರವು ತನ್ನ ಅತ್ಯಧಿಕ ದಿನದ ಗಳಿಕೆಯಾಗಿ 1.74 ಕೋಟಿ ರೂಪಾಯಿ ಸಂಗ್ರಹಿಸಿ ಸೈ ಎನಿಸಿಕೊಂಡಿದೆ. ಈ ಮೂಲಕ ಆರು ದಿನಗಳಲ್ಲಿ ಒಟ್ಟು 1,217 ಪ್ರದರ್ಶನಗಳಿಂದ ಜಾಗತಿಕವಾಗಿ 5.37 ಕೋಟಿ ರೂಪಾಯಿ ಗ್ರಾಸ್ ಹಾಗೂ 4.80 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿರುವುದು ಚಿತ್ರದ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.
ಚಿತ್ರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದ್ದರಿಂದ ನಿರ್ಮಾಪಕರಿಗೆ ಈಗಾಗಲೇ ದೊಡ್ಡ ಮಟ್ಟದ ಲಾಭ ಬಂದಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಅತ್ಯುತ್ತಮ ಮೌಖಿಕ ಪ್ರಚಾರದಿಂದಾಗಿ ಮುಂದಿನ ಮೂರು ದಿನಗಳ ರಜಾದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಿಗಿತ ಕಾಣುವ ಸಾಧ್ಯತೆಯಿದೆ. ಟ್ರೇಡ್ ವಿಶ್ಲೇಷಕರ ಪ್ರಕಾರ ಈ ಸಿನಿಮಾ ಸದ್ಯದಲ್ಲೇ ಮತ್ತಷ್ಟು ಹೊಸ ದಾಖಲೆಗಳನ್ನು ನಿರ್ಮಿಸಲಿದೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾಗೆ ಸಿಕ್ತು ಉತ್ತಮ ಪ್ರತಿಕ್ರಿಯೆ; ಏರಿಕೆ ಕಂಡ ಶೋಗಳ ಸಂಖ್ಯೆ
ನವೀನ ಕಥಾಹಂದರ ಹಾಗೂ ಪಾತ್ರವರ್ಗದ ನೈಜ ಅಭಿನಯವೇ ಈ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣವಾಗಿದೆ. ಸಣ್ಣ ಬಜೆಟ್‌ನ ಚಿತ್ರಗಳು ಸಹ ಉತ್ತಮ ವಿಷಯವಿದ್ದರೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಬಲ್ಲವು ಎಂಬುದನ್ನು ‘ಪ್ರೇಮದ ಊರಲಿ’ ಸಿನಿಮಾ ಮತ್ತೆ ಸಾಬೀತುಪಡಿಸಿದೆ. ಚಿತ್ರತಂಡದ ಶ್ರಮಕ್ಕೆ ಪ್ರೇಕ್ಷಕರು ಬಿಗ್ ಥಮ್ಸ್ ಅಪ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.