ಬರೋಬ್ಬರಿ 60 ಅಡಿ ಎತ್ತರದ ಪೋಸ್ಟರ್​ ಮೂಲಕ ಅನಾವರಣ ಆಯ್ತು ‘ಕ್ಯಾಪ್ಚರ್​’ ಶೀರ್ಷಿಕೆ

ನಟಿ ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಲೋಹಿತ್​ ಅವರ ಕಾಂಬಿನೇಷನ್​ನಲ್ಲಿ ‘ಕ್ಯಾಪ್ಚರ್’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರಕ್ಕೆ ಸದ್ದಿಲ್ಲದೇ ಶೂಟಿಂಗ್​ ಮುಗಿಸಲಾಗಿದೆ. ಟೈಟಲ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರವಿರಾಜ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಬರೋಬ್ಬರಿ 60 ಅಡಿ ಎತ್ತರದ ಪೋಸ್ಟರ್​ ಮೂಲಕ ಅನಾವರಣ ಆಯ್ತು ‘ಕ್ಯಾಪ್ಚರ್​’ ಶೀರ್ಷಿಕೆ
ಕ್ಯಾಪ್ಚರ್​ ಸಿನಿಮಾ ಟೈಟಲ್​ ಪೋಸ್ಟರ್​ ಅನಾವರಣ ಕಾರ್ಯಕ್ರಮ

Updated on: Oct 18, 2023 | 2:34 PM

ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಈಗಾಗಲೇ ಹಾರರ್​ ಸಿನಿಮಾಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಮತ್ತೊಂದು ಹಾರರ್ ಚಿತ್ರದ (Horror Movie) ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿ ಆಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ನಟಿಸಿರುವ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ‘ಕ್ಯಾಪ್ಚರ್’ (Capture) ಎಂಬುದು ಈ ಸಿನಿಮಾದ ಶೀರ್ಷಿಕೆ. ವಿಶೇಷ ಏನೆಂದರೆ, ಅಪಾರ ಸಂಖ್ಯೆಯ ಅಭಿಮಾನಿಗಳ ಎದುರಲ್ಲಿ ‘ಕ್ಯಾಪ್ಚರ್’ ಸಿನಿಮಾದ ಪೋಸ್ಟರ್ ಅನಾವರಣ ಮಾಡಲಾಗಿದೆ. ಈ ಪೋಸ್ಟರ್​ ಬರೋಬ್ಬರಿ 60 ಅಡಿ ಎತ್ತರ ಇದೆ. ಚಂದನವನದಲ್ಲಿ ಇದೇ ಮೊದಲ ಬಾರಿಗೆ ನಟಿಯ ಪೋಸ್ಟರ್​ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಿರುವುದು ಪ್ರಿಯಾಂಕಾ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಕ್ಯಾಪ್ಚರ್’ ಸಿನಿಮಾಗೆ ಲೋಹಿತ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಲೋಹಿತ್​ ಮತ್ತು ಪ್ರಿಯಾಂಕಾ ಅವರು ‘ಮಮ್ಮಿ’ ಹಾಗೂ ‘ದೇವಕಿ’ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಅವರ ಕಾಂಬಿನೇಷನ್​ನ 3ನೇ ಚಿತ್ರವಾಗಿ ‘ಕ್ಯಾಪ್ಚರ್​’ ಮೂಡಿಬರುತ್ತಿದೆ. ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ಈ ಚಿತ್ರಕ್ಕೆ ‘ಶ್ರೀದುರ್ಗಪರಮೇಶ್ವರಿ ಪ್ರೊಡಕ್ಷನ್ಸ್​’ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾ ಇದು.

Priyanka Upendra starrer Capture movie 60 feet tall Title Poster unveiled by Upendra

ಕ್ಯಾಪ್ಚರ್​ ಸಿನಿಮಾ ಟೈಟಲ್​ ಪೋಸ್ಟರ್​

ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಎದುರುಗಡೆ ವಿಭಿನ್ನವಾಗಿ ‘ಕ್ಯಾಪ್ಚರ್’ ಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಪ್ರಿಯಾಂಕಾ ಉಪೇಂದ್ರ ಅವರ ಬರೋಬ್ಬರಿ 60 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿದೆ. ಇದನ್ನು ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ಅನಾವರಣ ಮಾಡಿದರು. ಇದು ಹಾರರ್​ ಸಿನಿಮಾ ಆದ್ದರಿಂದ ಅದಕ್ಕೆ ತಕ್ಕಂತೆಯೇ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಇದು ಸಿನಿಪ್ರಿಯರ ಗಮನ ಸೆಳೆದಿದೆ. ಈ ಸಿನಿಮಾದ ಪ್ರಮುಖ ಆಕರ್ಷಣೆ ಏನೆಂದರೆ, ಇದು ಸಂಪೂರ್ಣವಾಗಿ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಆಗಿರುವ ಸಿನಿಮಾ. ಪ್ರಪಂಚದಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ‘ಕ್ಯಾಪ್ಚರ್​’ ತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್​ ಅನುಭವ

ಅಂದಹಾಗೆ, ಈ ಸಿನಿಮಾಗೆ ಸದ್ದಿಲ್ಲದೇ ಶೂಟಿಂಗ್​ ಮುಗಿಸಲಾಗಿದೆ. ಟೈಟಲ್ ಪೋಸ್ಟರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಎಸ್. ಪಾಂಡಿಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರವಿಚಂದ್ರನ್ ಸಂಕಲನ ಮಾಡುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಇನ್ನೂ ಅನೇಕ ಕಲಾವಿದರು ನಟಿಸಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ನವೆಂಬರ್‌ನಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us