ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಅಗಲಿ 5 ವರ್ಷ
Puneeth Rajkumar Death Anniversary: ಕರ್ನಾಟಕದ ಹೆಮ್ಮೆಯ ನಟ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅಕ್ಟೋಬರ್ 29ರ ಈ ದಿನದಂದು ರಾಜ್ಯಾದ್ಯಂತ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿದ್ದಾರೆ. ರಕ್ತದಾನ, ಅನ್ನಸಂತರ್ಪಣೆ ಮತ್ತು ಶಾಲಾ ಸಾಮಗ್ರಿಗಳ ವಿತರಣೆಯಂತಹ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಅಪ್ಪು ಅವರ ಅಮರ ನೆನಪನ್ನು ಎಲ್ಲರೂ ಸಾರ್ಥಕವಾಗಿ ಸ್ಮರಿಸುತ್ತಿದ್ದಾರೆ.

ಮುಖ್ಯಾಂಶಗಳು
- ಸ್ಮಾರಕದ ಬಳಿ ಹರಿದುಬಂದ ಅಭಿಮಾನಿಗಳ ಸಾಗರ
- ಅಪ್ಪು ಸ್ಮರಣೆಯಲ್ಲಿ ಕಂಠೀರವ ಸ್ಟುಡಿಯೋ
- ಸೇವಾ ಕಾರ್ಯಗಳ ಮೂಲಕ ಅಮರವಾದ 'ರಾಜಕುಮಾರ’
ಇಂದು (ಅಕ್ಟೋಬರ್ 29) ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿ. ಇಡೀ ನಾಡು ಅವರನ್ನು ಸ್ಮರಿಸುತ್ತಿದೆ. 2021ರ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್, ಕನ್ನಡಿಗರನ್ನು ಅಗಲಿ ಐದು ವರ್ಷಗಳು ಕಳೆದರೂ ಅವರ ನೆನಪು ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲೂ ಹಸಿರಾಗಿದೆ. ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯವನ್ನು ಅನೇಕರು ಇಂದಿಗೂ ಒಪ್ಪುತ್ತಿಲ್ಲ.
2021ರ ಅಕ್ಟೋಬರ್ 29ರಂದು ನಡೆದಿದ್ದು ಇಡೀ ಕರ್ನಾಟಕದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಪುನೀತ್ ಅವರು ಬೆಳಿಗ್ಗೆ ಜಿಮ್ ಅಲ್ಲಿ ವರ್ಕೌಟ್ ಮುಗಿಸಿದ ಬಳಿಕ ಅಸಾಧಾರಣವಾಗಿ ಬೆವರು ಹರಿದು ಬರುತ್ತಿತ್ತು. ಇದರಿಂದ ಅನುಮಾನಗೊಂಡು ಅವರು ಫ್ಯಾಮಿಲಿ ಡಾಕ್ಟರ್ ರಮಣ್ ರಾವ್ ಬಳಿ ತೆರಳಿದರು. ಅವರು ದೊಡ್ಡ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರು ಎಳೆದರು. ಅವರ ಪುಣ್ಯಸ್ಮರಣೆ ದಿನ ಇಡೀ ಕರ್ನಾಟಕ ಅವರನ್ನು ನೆನಪಿಸಿಕೊಳ್ಳುತ್ತಿದೆ.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಅಪ್ಪು ಸ್ಮಾರಕವನ್ನು ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳು ಅಪ್ಪು ನೆನಪಿನಲ್ಲಿ ನಮನ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಬೆಳಿಗ್ಗೆ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಮೊದಲು ಏನಾಯ್ತು? ವಿವರಿಸಿದ ಡಾ. ರಮಣ್ ರಾವ್
ಸಾಮಾಜಿಕ ಕಾರ್ಯಗಳು
ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಕೊಡುಗೈ ಗುಣ ಮತ್ತು ಸಾಮಾಜಿಕ ಕಳಕಳಿಯಿಂದ ಪುನೀತ್ ರಾಜ್‌ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಹಾದಿಯಲ್ಲೇ ಅಭಿಮಾನಿಗಳು ಇಂದು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿ ಬಳಗಗಳು ರಕ್ತದಾನ ಶಿಬಿರಗಳು, ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ನೋಂದಣಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ಮತ್ತು ಧನಸಹಾಯ ನೀಡುವ ಮೂಲಕ ಅಪ್ಪು ಅವರ ಸ್ಮರಣೆಯನ್ನು ಸಾರ್ಥಕಗೊಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅಪ್ಪು ಅವರನ್ನು ನೆನಪಿಸಿಕೊಳ್ಳಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




