ಅಂದು ಅಣ್ಣಾವ್ರ ಜತೆ ತೂಗುದೀಪ ಶ್ರೀನಿವಾಸ್​; ಇಂದು ಅಪ್ಪು ಜತೆ ದಿನಕರ್​ ತೂಗುದೀಪ! ಇಲ್ಲಿದೆ ಗುಡ್​ ನ್ಯೂಸ್​

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಅವರಿಗೆ ಇಂದು (ಮಾ.17) ಜನ್ಮದಿನ ಸಂಭ್ರಮ. ಆ ಸಲುವಾಗಿ ಹೊಸ ಸಿನಿಮಾಗಳು ಅನೌನ್ಸ್​ ಆಗಿವೆ. ಪೋಸ್ಟರ್​ಗಳು, ಪ್ರೋಮೋಗಳು ಬಿಡುಗಡೆ ಆಗಿವೆ.

ಅಂದು ಅಣ್ಣಾವ್ರ ಜತೆ ತೂಗುದೀಪ ಶ್ರೀನಿವಾಸ್​; ಇಂದು ಅಪ್ಪು ಜತೆ ದಿನಕರ್​ ತೂಗುದೀಪ! ಇಲ್ಲಿದೆ ಗುಡ್​ ನ್ಯೂಸ್​
ದಿನಕರ್​ - ಪುನೀತ್​ - ಶ್ರೀನಿವಾಸ್​ - ಡಾ. ರಾಜ್​

Updated on: Mar 17, 2021 | 12:32 PM

ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಸಂಭ್ರಮಿಸಲು ಇಂದು ಹಲವಾರು ಕಾರಣಗಳು ಸಿಕ್ಕಿವೆ. ಅಪ್ಪು ಜನ್ಮದಿನದ ಪ್ರಯುಕ್ತ ಹಲವು ಹೊಸ ನ್ಯೂಸ್​ಗಳು ಹೊರಬಂದಿವೆ. ಅದರಲ್ಲಿ ಹೆಚ್ಚು ಎಕ್ಸೈಟಿಂಗ್​ ಆಗಿರುವುದು ನಿರ್ದೇಶಕ ದಿನಕರ್​ ತೂಗುದೀಪ ಕೊಟ್ಟಿರುವ ನ್ಯೂಸ್​. ಅಪ್ಪು ಜೊತೆ ತಾವು ಹೊಸ ಸಿನಿಮಾ ಮಾಡುವುದಾಗಿ ದಿನಕರ್​ ಘೋಷಿಸಿದ್ದಾರೆ.

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಸಹೋದರ ದಿನಕರ್​ ತೂಗುದೀಪ ಅವರು ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಲವ್ಲೀ ಸ್ಟಾರ್​ ಪ್ರೇಮ್​ ಮತ್ತು ರಮ್ಯಾ ಜೋಡಿಯಾಗಿ ನಟಿಸಿದ್ದ ‘ಜೊತೆ ಜೊತೆಯಲಿ’, ದರ್ಶನ್​ ನಟನೆಯ ‘ನವಗ್ರಹ’, ‘ಸಾರಥಿ’ ಮುಂತಾದ ಸಿನಿಮಾಗಳಿಗೆ ದಿನಕರ್​ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಈಗ ಅವರ ಹೊಸ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಪುನೀತ್​ ಜೊತೆ ದಿನಕರ್​ ಸಿನಿಮಾ ಮಾಡುತ್ತಾರೆ ಎಂಬ ಗುಸುಗುಸು ಕಳೆದ ಹಲವು ದಿನಗಳಿಂದಲೂ ಕೇಳಿಬರುತ್ತಿತ್ತು. ಅದು ಈಗ ಅಧಿಕೃತವಾಗಿದೆ.

ತಾವು ಪುನೀತ್​ಗೆ ನಿರ್ದೇಶನ ಮಾಡುವ ಕುರಿತು ಟ್ವಿಟರ್​ ಮೂಲಕ ದಿನಕರ್​ ಮಾಹಿತಿ ಹಂಚಿಕೊಂಡಿದ್ದಾರೆ. ‘ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸುಮಾರು 5 ದಶಕಗಳು ನನ್ನ ತಂದೆ ತೂಗುದೀಪ ಶ್ರೀನಿವಾಸ್​ ಅವರು ಮತ್ತು ನಟಸಾರ್ವಭೌಮ ಡಾಕ್ಟರ್ ರಾಜ್​ಕುಮಾರ್ ಅಣ್ಣಾವ್ರ ಸ್ನೇಹವಿತ್ತು. ಅವರಿಬ್ಬರು ಜೊತೆಯಾಗಿ ಮಾಡಿದ ಚಿತ್ರಗಳಿಗೆ ಪ್ರೀತಿ-ಪ್ರೋತ್ಸಾಹ ನೀಡಿ ಆಶೀರ್ವದಿಸಿದ್ದೀರಿ. ಅದೇ ರೀತಿ ಈಗ ಮತ್ತೆ ನನ್ನ ಹಾಗು ಅಪ್ಪು ಸರ್ ರವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಚಿತ್ರಕ್ಕೂ ನಿಮ್ಮ ಪ್ರೋತ್ಸಾಹವಿರಲಿ. ಒಂದೊಳ್ಳೆಯ ಚಿತ್ರವನ್ನು ಕನ್ನಡಿಗರಿಗೆ ನೀಡುವ ಹಂಬಲದಲ್ಲಿದೆ ಚಿತ್ರತಂಡ’ ಎಂದು ದಿನಕರ್ ಟ್ವೀಟ್​ ಮಾಡಿದ್ದಾರೆ.

ಡಾ. ರಾಜ್​ಕುಮಾರ್​ ಮತ್ತು ದರ್ಶನ್​ ತಂದೆ ತೂಗುದೀಪ ಶ್ರೀನಿವಾಸ್​ ನಡುವೆ ಉತ್ತಮ ಬಾಂಧವ್ಯ ಇತ್ತು. ರಾಜ್​ಕುಮಾರ್​ ನಟನೆಯ ಹಲವಾರು ಸಿನಿಮಾಗಳಲ್ಲಿ ಶ್ರೀನಿವಾಸ್​ ಅವರು ವಿಲನ್​ ಆಗಿ ಅಭಿನಯಿಸಿದ್ದರು. ಆ ಕಾಲದಿಂದಲೂ ಈ ಎರಡು ಫ್ಯಾಮಿಲಿ ನಡುವೆ ಸ್ನೇಹಿವಿದೆ. ಈಗ ಅವರ ಮಕ್ಕಳು ಒಂದೇ ಸಿನಿಮಾಗಾಗಿ ಕೈ ಜೋಡಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಸಿನಿಮಾದ ಶೀರ್ಷಿಕೆ ಏನು? ಪುನೀತ್​ ಗೆಟಪ್​ ಹೇಗಿರಲಿದೆ? ಅಪ್ಪುಗೆ ಜೋಡಿಯಾಗಿ ಯಾರು ನಟಿಸುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ಇಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನಕ್ಕೆ ಎಲ್ಲರೂ ಶುಭಕೋರುತ್ತಿದ್ದಾರೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಕೂಡ ಟ್ವೀಟ್​ ಮಾಡುವ ಮೂಲಕ ಪುನೀತ್​ಗೆ ಶುಭ ಹಾರೈಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಪುನೀತ್​ ರಾಜ್​ಕುಮಾರ್​’ ಎಂದು ಅಭಿಮಾನಿಗಳ ಪ್ರೀತಿಯ ‘ದಾಸ’ ಟ್ವೀಟ್​ ಮಾಡಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us