ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾಗುವುದಕ್ಕೂ ಮುನ್ನ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಪೈಕಿ ‘ಲಕ್ಕಿ ಮ್ಯಾನ್’ ಚಿತ್ರ ಕೂಡ ಪ್ರಮುಖವಾದದ್ದು. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಸಂಗೀತ ಶೃಂಗೇರಿ ಜೋಡಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಮತ್ತು ಪ್ರಭುದೇವ ಅವರು ಒಂದು ಹಾಡಿನಲ್ಲಿ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದು, ಕಥೆಗೆ ತಿರುವು ನೀಡಲಿದ್ದಾರೆ. ಈಗ ‘ಲಕ್ಕಿ ಮ್ಯಾನ್’ (Lucky Man) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇದರಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರನ್ನು ನೋಡಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ. ಟೀಸರ್ನಲ್ಲಿ ಅಪ್ಪು ಹೇಳಿರುವ ಒಂದು ಡೈಲಾಗ್ ಗಮನ ಸೆಳೆಯುತ್ತಿದೆ.
‘ನಿನ್ನ ಲೈಫ್ನಲ್ಲಿ ಆಗಿರುವ ಮಿಸ್ಟೇಕ್ಗಳನ್ನೆಲ್ಲ ಸರಿ ಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡುತ್ತೀನಿ’ ಎಂದು ಪುನೀತ್ ರಾಜ್ಕುಮಾರ್ ಅವರು ಡೈಲಾಗ್ ಹೊಡೆದಿದ್ದಾರೆ. ಅವರ ಧ್ವನಿಯಲ್ಲಿಯೇ ಇದನ್ನು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂಬ ಆಸೆ ಸಿನಿಪ್ರಿಯರಲ್ಲಿ ಮೂಡಿದೆ. ‘ಶೀಘ್ರವೇ ದೇವರು ಬರಲಿದ್ದಾರೆ’ ಎನ್ನುವ ಮೂಲಕ ಸದ್ಯದಲ್ಲೇ ರಿಲೀಸ್ ಡೇಟ್ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.
‘ಲಕ್ಕಿ ಮ್ಯಾನ್’ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಸಿನಿಮಾದಲ್ಲಿ ನೀವು ದೇವರ ಪಾತ್ರ ಮಾಡಿದ್ದೀರಿ. ನಿಜಜೀವನದಲ್ಲೂ ದೇವರೇ ಆಗಿಬಿಟ್ಟಿದ್ದೀರಿ’ ಎಂದು ಅಪ್ಪು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ‘ಸೆಕೆಂಡ್ ಚಾನ್ಸ್ ಕೊಡ್ತೀನಿ ಅಂತ ಹೇಳಿದ್ದೀರಿ. ಆದರೆ ಆ ದೇವರು ನಿಮಗೆ ಸೆಕೆಂಡ್ ಚಾನ್ಸ್ ಕೊಡಲಿಲ್ಲ’ ಎಂದು ಮತ್ತೋರ್ವ ಅಭಿಮಾನಿ ನೋವು ತೋಡಿಕೊಂಡಿದ್ದಾರೆ.
ಪ್ರಭುದೇವ ಅವರು ಡ್ಯಾನ್ಸ್ ವಿಚಾರದಲ್ಲಿ ಸಿಕ್ಕಾಪಟ್ಟೆ ಫೇಮಸ್. ಇನ್ನು, ಪುನೀತ್ ಕೂಡ ತುಂಬ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ಒಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದರೆ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಆ ಹಾಡನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಾಧು ಕೋಕಿಲ, ರೋಶಿನಿ ಪ್ರಕಾಶ್ ಮುಂತಾದವರು ಕೂಡ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ನಟಿಸಿದ್ದಾರೆ. ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
Published On - 1:28 pm, Mon, 25 July 22