ಸ್ಯಾಂಡಲ್ವುಡ್ ನಟ, ಅಭಿಮಾನಿಗಳಿಂದ ಅಪ್ಪು ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜಕುಮಾರ್ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಪುನೀತ್ ನಿಧನಕ್ಕೆ ದೇಶವೇ ಕಂಬನಿ ಮಿಡಿದಿದ್ದು, ಅಭಿಮಾನಿಗಳು ತೀವ್ರ ಶೋಕದಲ್ಲಿ ಮುಳುಗಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಾ.ರಾಜ್ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪುನೀತ್ ನಿಧನಕ್ಕೆ ದೇಶದ ವಿವಿಧ ಭಾಷೆಗಳ ಚಿತ್ರರಂಗಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಇಂದು ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ಆಗಮಿಸುತ್ತಿದ್ದು, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ಗಳಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ನಾಳೆ ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂತ್ಯಕ್ರಿಯೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ರಾಜ್ಕುಮಾರ್ ಕುಟುಂಬಸ್ಥರ ಜತೆ ಚರ್ಚಿಸಿದ್ದೇವೆ. ಇಂದು ಇಡೀ ದಿನ ದರ್ಶನ ಪಡೆಯುವುದಕ್ಕೆ ಅವಕಾಶವಿದೆ. ಅಭಿಮಾನಿಗಳು ಶಾಂತಿಯುತವಾಗಿ ಬಂದು ದರ್ಶನ ಪಡೆಯಿರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Published On - 7:45 am, Sat, 30 October 21