ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯೋಕೆ ಅಭಿಮಾನಿಗಳು ತಂಡೋಪ ತಂಡವಾಗಿ ಬರುತ್ತಿದ್ದಾರೆ. ನಗುಮುಖ ಹೊತ್ತು ಎಲ್ಲ ಕಡೆಗಳಲ್ಲೂ ತಿರುಗಾಡುತ್ತಿದ್ದ ಅವರು ಈಗ ಇಲ್ಲ ಎನ್ನುವ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಇಂದು (ಅಕ್ಟೋಬರ್ 30) ಸಂಜೆಯೇ ಅವರ ಅಂತ್ಯಕ್ರಿಯೆ ಮಾಡೋಕೆ ನಿರ್ಧರಿಸಲಾಗಿತ್ತು. ಆದರೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಭಾನುವಾರ (ಅಕ್ಟೋಬರ್ 31) ಅವರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ನಾಳೆ ಬೆಳಗ್ಗೆ 10.30ರೊಳಗೆ ನಟ ಪುನೀತ್ ಅಂತ್ಯಕ್ರಿಯೆ ನೆರವರೇರಲಿದೆ. ಬೆಳಗ್ಗೆ 6 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್ ಮಣ್ಣಾಗಲಿದ್ದಾರೆ. ಕುಟುಂಬಸ್ಥರು ಮತ್ತು ಅವರ ಆಪ್ತ ವಲಯಕ್ಕೆ ಮಾತ್ರ ಇಲ್ಲಿಗೆ ತೆರಳಲು ಅವಕಾಶ ಇದೆ. ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದ ಒಳಗಡೆಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಅಂತಿಮ ಕಾರ್ಯ ನೆರವೇರಿಸಲಿದ್ದಾರೆ. ರಾಜ್ಕುಮಾರ್ ಕುಟುಂಬ ಸದಸ್ಯರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಕಲ ಸಿದ್ಧತೆ ನಡೆಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು. ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳು ಅಂತಿಮ ಸಂಸ್ಕಾರ ಮಾಡುವಂತಿಲ್ಲ. ಹೀಗಾಗಿ, ವಿನಯ್ ರಾಜ್ಕುಮಾರ್ ಅವರಿಂದ ಕೊನೆಯ ಕಾರ್ಯಗಳು ನೆರವೇರಲಿದೆ.
ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧೃತಿಗೆ ತಂದೆ ಪುನೀತ್ ರಾಜ್ಕುಮಾರ್ ಮೃತಪಟ್ಟಿರುವ ವಿಚಾರ ನಿಜಕ್ಕೂ ಶಾಕಿಂಗ್ ಆಗಿದೆ. ತಂದೆ ಮೃತಪಟ್ಟ ಸುದ್ದಿ ಕೇಳುತ್ತಲೇ ಅವರು ವಿಮಾನ ಏರಿ ಬೆಂಗಳೂರಿಗೆ ಬಂದಿದ್ದಾರೆ. 24 ಗಂಟೆಗೂ ಅಧಿಕ ಕಾಲ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಕಂಠೀರವ ಸ್ಟೇಡಿಯಂ ತಲುಪಿದರು. ಅಪ್ಪನ ತಲೆ ಸವರಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ದೊಡ್ಡಪ್ಪ ಶಿವರಾಜ್ಕುಮಾರ್ ಅವರು ಧೃತಿಯನ್ನು ಸಂತೈಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ‘ಪುನೀತ್ ಜಿಮ್ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ
ಅಪ್ಪನ ಅಂತಿಮ ದರ್ಶನ ಪಡೆದ ಧೃತಿ; ಪುನೀತ್ ತಲೆ ಸವರಿ ಬಿಕ್ಕಿಬಿಕ್ಕಿ ಅತ್ತ ಮಗಳು