ನಟ ಪುನೀತ್ ರಾಜ್ಕುಮಾರ್ ಅವರು ‘ಜೇಮ್ಸ್’ ಹಾಗೂ ‘ದ್ವಿತ್ವ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರು ಶಿವಮೊಗ್ಗ ತಾಲೂಕಿನ ಸಕ್ರೆಬೈಲಿನ ಆನೆ ಬಿಡಾರಕ್ಕೆ ಇಂದು (ಸೆಪ್ಟೆಂಬರ್ 1) ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ನೋಡೋಕೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಅಷ್ಟಕ್ಕೂ ಅವರು ಸಕ್ರೆಬೈಲಿಗೆ ತೆರಳೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪುನೀತ್ ರಾಜ್ಕುಮಾರ್ ಸರ್ಕಾರದ ಅನೇಕ ಡಾಕ್ಯುಮೆಂಟರಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಈಗ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಅವರು ಸಕ್ರೆಬೈಲ್ಗೆ ಭೇಟಿ ಕೊಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಆಗಮಿಸುತ್ತಿರುವ ವಿಚಾರವನ್ನು ತಿಳಿದಿದ್ದ ಅಭಿಮಾನಿಗಳು ಅಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಸುಮಾರು ಎರಡು ಗಂಟೆ ಕಾಲ ಪುನೀತ್ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಓಪನ್ ಜೀಪ್ನಲ್ಲಿ ಪುನೀತ್ ಆಗಮಿಸಿದ್ದಾರೆ. ಆನೆಗಳನ್ನು ಅವರು ಮುದ್ದಾಡುವ ದೃಶ್ಯ, ಕುಂತಿ ಹಾಗೂ ಧನುಷ್ ಹೆಸರಿನ ಆನೆಗೆ ಆಹಾರ ನೀಡುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇನ್ನು, ಪುನೀತ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಅಭಿಮಾನಗಳ ಕೋರಿಕೆಗೆ ಅಪ್ಪು ಮಣಿದಿದ್ದಾರೆ. ಶೂಟಿಂಗ್ಗೆ ಬ್ರೇಕ್ ಕೊಟ್ಟು ಅವರಿಗೆ ದರ್ಶನ ನೀಡಿದ್ದಾರೆ. ಈ ವೇಳೆ ಆಭಿಮಾನಿಗಳಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ ಪುನೀತ್. ಕೆಲವರು ಪುನೀತ್ ರಾಜ್ಕುಮಾರ್ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.
ಇತ್ತೀಚೆಗೆ ಕೊವಿಡ್ ಬಗ್ಗೆ ಪುನೀತ್ ಜಾಗೃತಿ ಮೂಡಿಸಿದ್ದರು. ಈ ಬಗ್ಗೆ ವಿಡಿಯೋ ಸಂದೇಶ ನೀಡಿದ್ದ ಪುನೀತ್ ‘ಕೊವಿಡ್ ಎರಡನೇ ಅಲೆ ತುಂಬಾ ಗಂಭೀರ ವಿಚಾರ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊವಿಡ್ನಿಂದ ದೂರ ಇರಬಹುದು. ನಿಮ್ಮ ಸರದಿ ಬಂದಾಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ನಮಗೆ ಕೊವಿಡ್ ಬಂದರೆ ಭಯ ಬೇಡ. ಹತ್ತಿರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ. ಸರ್ಕಾರ ಹೇಳಿದ ನಿಯಮ ಪಾಲಿಸುತ್ತಾ ಕೊವಿಡ್ ವಿರುದ್ಧ ಗೆಲ್ಲೋಣ’ ಎಂದು ಪುನೀತ್ ಕರೆ ನೀಡಿದ್ದರು.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ‘ದ್ವಿತ್ವ’ ಚಿತ್ರಕ್ಕೆ ನಾಯಕಿಯಾದ ತ್ರಿಷಾ ಕೃಷ್ಣನ್
Published On - 9:36 pm, Wed, 1 September 21