ರಜನೀಕಾಂತ್ (Rajinikanth) ಇಂದು (ಆಗಸ್ಟ್ 29) ಬೆಂಗಳೂರಿಗೆ (Bengaluru) ಬಂದಿದ್ದರು. ಅವರಿಗೆ ಬೆಂಗಳೂರು ಹೊಸತಲ್ಲ, ಇಲ್ಲೇ ಹುಟ್ಟಿ ಬೆಳೆದು ಸೂಪರ್ ಸ್ಟಾರ್ ಆಗಿದ್ದಾರೆ. ಬೆಂಗಳೂರಿಗೆ ಬಂದಾಗಲೆಲ್ಲ ಅವರು ಭೇಟಿ ಮಾಡುವ ಗೆಳೆಯ ರಾವ್ ಬಹದ್ದೂರ್ ಅವರೊಟ್ಟಿಗೆ ಜಯನಗರದ ಬಸ್ ಡಿಪೋಗೆ ಭೇಟಿ ನೀಡಿದ್ದರು, ಇನ್ನೂ ಹಲವು ಜಾಗಗಳಿಗೆ ಭೇಟಿ ನೀಡಿ, ಹಳೆಯ ಗೆಳೆಯರನ್ನೆಲ್ಲ ಮಾತನಾಡಿಸಿ ಚೆನ್ನೈಗೆ ವಾಪಸ್ಸಾಗಿದ್ದಾರೆ. ಆದರೆ ಚೆನ್ನೈಗೆ ಹೋಗುವ ಮುನ್ನ ರಜನೀಕಾಂತ್, ತಮ್ಮ ಗೆಳೆಯನಿಗೆ ಫೋಟೊ ಒಂದನ್ನು ಫ್ರೇಮ್ ಹಾಕಿಸುವಂತೆ ಸೂಚನೆ ನೀಡಿ ಹೋಗಿದ್ದಾರೆ. ಯಾವುದು ಆ ಫೋಟೊ?
ಬೆಂಗಳೂರಿಗೆ ಬಂದ ಕೂಡಲೇ ಗೆಳೆಯ ರಾಜ್ ಬಹದ್ದೂರ್ ಅನ್ನು ಕರೆದುಕೊಂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿದ್ದ ರಜನೀಕಾಂತ್ ಅಲ್ಲಿಂದ ಮಯ್ಯಾಸ್ಗೆ ಹೋಗಿ ಕಾಫಿ ಕುಡಿದು ಅಲ್ಲಿ, ನಾವು ಬಸ್ ಕಂಡಕ್ಟರ್, ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಡಿಪೋಗೆ ಹೋಗೋಣ ನಡಿ ಎಂದು ಗೆಳೆಯನನ್ನು ಕರೆದುಕೊಂಡು ಜಯನಗರದ ಟಿ ಬ್ಲಾಕ್ನ ಬಸ್ ಡಿಪೋಗೆ ಹೋದರಂತೆ ರಜನೀಕಾಂತ್.
ಇದನ್ನೂ ಓದಿ:ರಜನೀಕಾಂತ್-ಯೋಗಿ ಆದಿತ್ಯನಾಥ್ ಭೇಟಿ: ಕಾಲಿಗೆ ನಮಸ್ಕರಿಸಿದ ಸೂಪರ್ ಸ್ಟಾರ್
ಜಯನಗರದ ಆ ಡಿಪೋ ರಜನೀಕಾಂತ್ಗೆ ಬಹು ಅಚ್ಚು ಮೆಚ್ಚು. ಅಲ್ಲಿಯೇ ಅವರು ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿದ್ದು, ಜೀವದ ಗೆಳೆಯ ರಾಜ್ ಬಹದ್ದೂರ್ ಸಿಕ್ಕಿದ್ದು ಸಹ ಅಲ್ಲಿಯೇ. ಬಸ್ ಡಿಪೋನಲ್ಲೆಲ್ಲ ಗೆಳೆಯನೊಟ್ಟಿ ಓಡಾಡಿದ ರಜನೀಕಾಂತ್ ಅಲ್ಲಿನ ಸಿಬ್ಬಂದಿಯೊಡನೆ ಪ್ರೀತಿಯಿಂದ ಮಾತನಾಡಿ, ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ನಂತರ ಅಲ್ಲಿಂದ ಹೊರ ಬರಬೇಕಾದರೆ ಗೇಟ್ ಬಳಿ ನಿಂತು ಗೆಳೆಯನ ರಾಜ್ ಬಹದ್ದೂರ್ಗೆ ‘ಬಾ ಇಲ್ಲಿ ಒಂದು ಫೋಟೊ ತೆಗೆದುಕೊಳ್ಳೋಣ’ ಎಂದಿದ್ದಾರೆ. ಅಂತೆಯೇ ಇಬ್ಬರೇ ಗೇಟ್ನ ಬಳಿ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ’53 ವರ್ಷಗಳ ಹಿಂದೆ ಇಲ್ಲಿಯೇ ನಾವಿಬ್ಬರು ಮೊದಲು ಭೇಟಿ ಆಗಿದ್ದೆವು, ಈಗ ಮತ್ತೆ ಇಲ್ಲೇ ನಿಂತಿದ್ದೇವೆ. ಈ ಫೋಟೊಕ್ಕೆ ಫ್ರೇಮು ಹಾಕಿಸು’ ಎಂದರಂತೆ.
ಬಸ್ ಡಿಪೋ ಮಾತ್ರವೇ ಅಲ್ಲದೆ, ಬೆಂಗಳೂರಿನ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಅಲ್ಲಿ ಕೆಲ ಕಾಲ ಧ್ಯಾನ ಮಾಡಿದ್ದಾರೆ. ಬಳಿಕ ಕುಟುಂಬದವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಅಲ್ಲಿಂದ ತೆರಳಿದ್ದಾರೆ. ಇದೇ ದಿನ ಮಯ್ಯಾಸ್ ಹೋಟೆಲ್ಗೆ ತೆರಳಿ ಗೆಳೆಯರೊಡನೆ ಕಾಫಿ ಸಹ ಕುಡಿದಿದ್ದಾರೆ ರಜನೀಕಾಂತ್. ಕೊನೆಗೆ ಗೆಳೆಯ ರಾವ್ ಬಹದ್ದೂರ್ ಅನ್ನು ಮನೆಗೆ ಡ್ರಾಪ್ ಮಾಡಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಚೆನ್ನೈಗೆ ವಾಪಸ್ಸಾಗಿದ್ದಾರೆ.
‘ಜೈಲರ್’ ಸಿನಿಮಾದ ಭಾರಿ ಯಶಸ್ಸಿನ ಖುಷಿಯಲ್ಲಿರುವ ರಜನೀಕಾಂತ್, ಕೆಲವು ದಿನಗಳ ಹಿಂದಷ್ಟೆ ಉತ್ತರ ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸ ಮಾಡಿದ್ದರು. ಬದ್ರಿನಾಥ, ಕೇದಾರ್ನಾಥ, ಬಾಬಾ ಗುಹೆಗಳಲ್ಲಿ ಸುತ್ತಾಡಿ, ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಇನ್ನೂ ಕೆಲವರನ್ನು ಭೇಟಿ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ