
‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯಿಸಿರುವ ‘777 ಚಾರ್ಲಿ’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಜೂನ್ 10ರಂದು ವಿಶ್ವಾದ್ಯಂತ ‘777 ಚಾರ್ಲಿ’ (777 Charlie) ರಿಲೀಸ್ ಆಗಲಿದೆ. ಆದರೆ ಅದಕ್ಕೂ ಮುನ್ನ ಪ್ರೀಮಿಯರ್ ಶೋಗಳ ಮೂಲಕ ಸದ್ದು ಮಾಡಲು ಈ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಒಂದೆರಡು ಕಡೆಗಳಲ್ಲಿ ಪ್ರೀಮಿಯರ್ ಶೋ ಮಾಡುವುದು ಕಾಮನ್. ಆದರೆ ಈ ವಿಚಾರದಲ್ಲಿ ‘777 ಚಾರ್ಲಿ’ ತಂಡ ದೊಡ್ಡ ಹೆಜ್ಜೆಯನ್ನೇ ಇಡುತ್ತಿದೆ. ಭಾರತದ 21 ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ (777 Charlie premier show) ಆಯೋಜಿಸಲಾಗುತ್ತಿದೆ. ಅಂದ್ರೆ, ಜೂ.10ಕ್ಕೂ ಮೊದಲೇ ಈ ಚಿತ್ರವನ್ನು ಜನರು ಕಣ್ತುಂಬಿಕೊಳ್ಳಬಹುದು. ಈ ನ್ಯೂಸ್ ಕೇಳಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಈ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಯಾವ ಯಾವ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಲಿದೆ? ದಿನಾಂಕ ಯಾವುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
‘777 ಚಾರ್ಲಿ’ ಚಿತ್ರದ ಟ್ರೇಲರ್ ನೋಡಿದ ಎಲ್ಲರಿಗೂ ಇಷ್ಟ ಆಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಬೇಕು ಎಂದು ಸಿನಿಪ್ರಿಯರು ಹಂಬಲ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯದ ಕಥೆ ಇದೆ. ಹಾಗಾಗಿ ಪ್ರಾಣಿಪ್ರಿಯರೆಲ್ಲರೂ ‘777 ಚಾರ್ಲಿ’ ನೋಡಲು ಕಾದಿದ್ದಾರೆ.
ಜೂನ್ 2ರಂದು ದೆಹಲಿ ಮತ್ತು ಅಮೃತ್ಸರದಲ್ಲಿ ಪೇಯ್ಡ್ ಪ್ರೀಮಿಯರ್ ಆಗಲಿದೆ. ಜೂನ್ 3ರಂದು ಲಖನೌ, ಜೂನ್ 6ರಂದು ಚೆನ್ನೈ, ಕೊಚ್ಚಿ, ಜೈಪುರ, ಪುಣೆ, ಮುಂಬೈನಲ್ಲಿ ವಿಶೇಷ ಪ್ರದರ್ಶನ ನಡೆಯಲಿದೆ. ಜೂನ್ 7ಕ್ಕೆ ಹೈದರಾಬಾದ್, ಅಹಮದಾಬಾದ್, ತ್ರಿವೆಂಡ್ರಮ್, ಸೊಲ್ಲಾಪುರ, ವಾರಾಣಸಿ, ಕೊಯಂಬತ್ತೂರ್ನಲ್ಲಿ ಚಿತ್ರ ಪ್ರೀಮಿಯರ್ ಆಗಲಿದೆ. ಜೂನ್ 8ರಂದು ವಿಶಾಖಪಟ್ಟಣ, ಮಧುರೈ, ಕೋಲ್ಕತ್ತಾ, ಬರೋಡ ನಗರಗಳ ಜನರು ‘777 ಚಾರ್ಲಿ’ ಸಿನಿಮಾ ನೋಡಬಹುದು. ನಾಗ್ಪುರ, ಸೂರತ್, ಕರ್ನಾಟಕದ ಹಲವು ನಗರಗಳಲ್ಲಿ ಜೂನ್ 9ರಂದು ಪ್ರೀಮಿಯರ್ ಆಗಲಿದೆ.
ಪರಂವಾ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಚಾರ್ಲಿ 777’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ದಾನಿಶ್ ಸೇಠ್, ರಾಜ್ ಬಿ. ಶೆಟ್ಟಿ, ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ. ನೋಬಿನ್ ಪೌಲ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Thu, 2 June 22