‘ಮೂವರು ದರ್ಶನ್​ಗಳಿದ್ದಾರೆ’ ರಮೇಶ್ ಅರವಿಂದ್ ಭಿನ್ನ ದೃಷ್ಟಿ

|

Updated on: Sep 10, 2024 | 6:23 PM

ದರ್ಶನ್ ತೂಗುದೀಪ ಪ್ರಕರಣದ ಬಗ್ಗೆ ಮಾತನಾಡಿರುವ ಹಿರಿಯ ನಟ ರಮೇಶ್ ಅರವಿಂದ್ ಪ್ರಕರಣದ ಬಗ್ಗೆ ಭಿನ್ನ ಮತ್ತು ಧನಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದರ್ಶನ್ ಒಬ್ಬರಲ್ಲ ಮೂವರು ಇದ್ದಾರೆ ಎಂದಿದ್ದಾರೆ.

‘ಮೂವರು ದರ್ಶನ್​ಗಳಿದ್ದಾರೆ’ ರಮೇಶ್ ಅರವಿಂದ್ ಭಿನ್ನ ದೃಷ್ಟಿ
Follow us on

ದರ್ಶನ್ ಪ್ರಕರಣದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅಂಧರಾಗಿ ದರ್ಶನ್​ಗೆ ಬೇಷರತ್ ಬೆಂಬಲ ಘೋಷಿಸಿದ್ದರೆ, ಇನ್ನು ಕೆಲವರು ದರ್ಶನ್ ಮಾಡಿದ್ದೇ ಸರಿ ಎಂದಿದ್ದಾರೆ. ಇನ್ನು ಕೆಲವರು ದರ್ಶನ್​ಗೆ ಸರಿಯಾಗಿಯೇ ಆಗಿದೆ ಎಂದಿದ್ದಾರೆ. ದರ್ಶನ್​ ಇಂದಾಗಿ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ. ಇನ್ನು ಕೆಲವರು ದರ್ಶನ್ ಸಹವಾಸ ದೋಷದಿಂದ ಹೀಗಾಗಿದೆ ಎಂದಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದಿದ್ದಾರೆ. ಇನ್ನು ಕೆಲವರು ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಹೀಗಿರುವಾಗ ಜಂಟಲ್​ಮ್ಯಾನ್ ನಟ ಎಂದೇ ಕರೆಸಿಕೊಳ್ಳುವ, ಸ್ವತಃ ಮೋಟಿವೇಷನಲ್ ಸ್ಪೀಕರ್ ಸಹ ಆಗಿರುವ ರಮೇಶ್, ಈ ಪ್ರಕರಣದ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ನಟ ರಮೇಶ್ ಅರವಿಂದ್, ‘ನಾನು ಸಾಮಾನ್ಯವಾಗಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಪ್ರಕಾರ ಮೂವರು ದರ್ಶನ್​ಗಳಿದ್ದಾರೆ. ಒಬ್ಬರು ನಿನ್ನೆಯ ದರ್ಶನ್, ಅವರು ನಮಗೆಲ್ಲ ಚೆನ್ನಾಗಿ ಪರಿಚಯ, ತಮ್ಮ ಸಿನಿಮಾಗಳಿಂದ ನಮ್ಮನ್ನು ಬಹುವಾಗಿ ರಂಜಿಸಿರುವ ದರ್ಶನ್, ವೀಕೆಂಡ್​ ವಿತ್ ರಮೇಶ್​ನಲ್ಲಿ ನಮ್ಮ ಮುಂದೆ ಸಾಧಕರ ಕುರ್ಚಿಯಲ್ಲಿ ಕೂತಿದ್ದ ದರ್ಶನ್. ಆ ದರ್ಶನ್ ನಮಗೆ ಬಹಳ ಆಪ್ತ’ ಎಂದಿದ್ದಾರೆ.

ನಿನ್ನೆಯ ದರ್ಶನ್ ಬಳಿಕ ಇಂದಿನ ದರ್ಶನ್ ಒಬ್ಬರಿದ್ದಾರೆ. ಆ ದರ್ಶನ್ ಅನ್ನು ನಾವು ಈಗ ನೋಡುತ್ತಿದ್ದೇವೆ. ಅವರು ಜೈಲಿನಲ್ಲಿದ್ದಾರೆ. ಏನೋ ತಪ್ಪು ಆಗಿಬಿಟ್ಟಿದೆ ಅದಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಘಟನೆಯಿಂದ ನಮಗೆಲ್ಲರಿಗೂ ಬೇಜಾರಾಗಿದೆ. ದೊಡ್ಡ ತಪ್ಪು ಆಗಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇ ಬೇಕು. ಕಾನೂನು ಆ ಕಾರ್ಯವನ್ನು ಮಾಡಿಯೇ ಮಾಡುತ್ತೆ’ ಎಂದಿದ್ದಾರೆ ರಮೇಶ್.

ಇದನ್ನೂ ಓದಿ:ಚಾರ್ಜ್​ಶೀಟ್​ ಸಲ್ಲಿಕೆ ಬಳಿಕ ಬಳ್ಳಾರಿಯಲ್ಲಿ ಪತ್ನಿ, ತಾಯಿ ಭೇಟಿಗೆ ಮನವಿ ಮಾಡಿದ ದರ್ಶನ್​

‘ಆದರೆ ಈ ಎರಡೂ ದರ್ಶನ್​ಗಿಂತಲೂ ಮುಖ್ಯವಾಗಿ ಇನ್ನೊಬ್ಬ ದರ್ಶನ್ ಇದ್ದಾರೆ ಅದು ನಾಳೆಯ ದರ್ಶನ್. ಈ ಸಮಸ್ಯೆಯಿಂದ ಹೊರಬಂದಾಗ ಅಥವಾ ಶಿಕ್ಷೆಯನ್ನು ಅನುಭವಿಸಿ ಹೊರ ಬಂದಾಗ ಅವರು ಏನು ಮಾಡುತ್ತಾರೆ, ಹೇಗೆ ಇರುತ್ತಾರೆ ಎಂಬುದು ಬಹಳ ಮುಖ್ಯ. ‘ಯೂ ಟರ್ನ್ ಇಲ್ಲ’ ಎಂಬ ಫಲಕ ಕಾಣಿಸಿಕೊಳ್ಳುವುದು ರಸ್ತೆಯಲ್ಲಿ ಮಾತ್ರ. ಆದರೆ ಜೀವನದಲ್ಲಿ ಹಾಗಲ್ಲ. ಜೀವನದಲ್ಲಿ ಒತಿಗಾಗಿ ಯಾವಾಗ ಬೇಕಾದರೂ ಯೂ ಟರ್ನ್ ತೆಗೆದುಕೊಳ್ಳಬಹುದು. ಈಗ ಆಗಿರುವ ತಪ್ಪಿಗೆ ಶಿಕ್ಷೆಆಗಬೇಕು ಎಂಬುದು ನಿಯಮ ಅದು ಆಗಿಯೇ ಆಗುತ್ತೆ. ಆದರೆ ಇದೆಲ್ಲ ಆದ ಬಳಿಕ ಮತ್ತೊಂದು ಅವಕಾಶ ಅವರಿಗೆ ಇದೆ. ಎಲ್ಲವನ್ನು ಸರಿ ಮಾಡಿಕೊಂಡು ನಿನ್ನೆಯ ದರ್ಶನ್ ಮತ್ತೆ ನಾಳೆಯ ದರ್ಶನ್ ಆಗಿ ಕಾಣಿಸಿಕೊಳ್ಳುವ ಅವಕಾಶ ಇದೆ’ ಎಂದಿದ್ದಾರೆ ರಮೇಶ್ ಅರವಿಂದ್.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ಮತ್ತು ಇತರೆ 16 ಆರೋಪಿಗಳನ್ನು ಬಂಧಿಸಿ ಮೂರು ತಿಂಗಳಾಗಿದೆ. ಪ್ರಕರಣದಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ದರ್ಶನ್ ಮುಂದಿನ ವಾರದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ