
ಮಧ್ಯ ರಾತ್ರಿ ಪಟಾಕಿ ಸಿಡಿಸುವುದು, ಅಬ್ಬರದ ಸಂಗೀತ ಹಾಕುವುದರ ವಿರುದ್ಧ ನಟಿ ರಮ್ಯಾ ದನಿ ಎತ್ತಿದ್ದಾರೆ. ನಿನ್ನೆ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದ ನಟಿ ರಮ್ಯಾ, ‘ಫನ್ ವರ್ಲ್ಡ್’ನಲ್ಲಿ ತಡರಾತ್ರಿಯಿಂದ ಮುಂಜಾವಿನ ವರೆಗೂ ಪಟಾಕಿಗಳನ್ನು ಹೊಡೆಯಲಾಗಿದೆ ಜೋರಾಗಿ ಸಂಗೀತ ಸಹ ಹಾಕಲಾಗಿತ್ತು ಎಂದು ಆರೋಪಿಸಿದ್ದರು. ಆದರೆ ಫನ್ ವರ್ಲ್ಡ್ನವರು ಅದು ತಾವು ಮಾಡಿದ್ದಲ್ಲ, ಫನ್ ವರ್ಲ್ಡ್ ಬಳಿಯ ಶಾಲೆಯ ಬಳಿ ದಸರಾ ಆಚರಣೆ ಇತ್ತು ಅಲ್ಲಿನವರು ಮಾಡಿರಬೇಕು ಎಂದಿದ್ದರು. ಇದೀಗ ರಮ್ಯಾ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ದಸರಾ ಸಂಭ್ರಮದ ಹೆಸರಲ್ಲಿ ನಿಯಮ ಮುರಿಯುವವರ ಬಗ್ಗೆ ಸಿಟ್ಟು ಹೊರಹಾಕಿದ್ದಾರೆ.
‘ಬೆಳಗಿನ ಜಾವ 5:45 ನಿಮಿಷದವರೆಗೆ ಪಟಾಕಿ ಹೊಡೆಯುತ್ತಾ, ಜೋರಾಗಿ ಹಾಡುಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಿದ್ದು ಫನ್ ವರ್ಲ್ಡ್ನವರು ಅಲ್ಲ. ಬದಲಿಗೆ ಜೆಸಿ ನಗರದ ರಾಧಾಕೃಷ್ಣ ಚಿತ್ರಮಂದಿರದ ಬಳಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಯಾರೋ ಆ ಕೃತ್ಯ ಮಾಡಿದ್ದಾರೆ. ಯಾರಿಗೇ ಆಗಲಿ ನಿಯಮ ಒಂದೇ. ಯಾರೂ ಕೂಡ ಕಾನೂನಿಗಿಂತ ಮೇಲಾದವರು ಇಲ್ಲ. ಯಾರಿಗಾದರೂ ಬೆಳಗಿನ ಜಾವ ಆರು ಗಂಟೆ ವರೆಗೆ ವಿಶೇಷ ಅನುಮತಿ ಸಿಕ್ಕಿದೆ ಎಂದರೆ ಅದು ಎಲ್ಲರಿಗೂ ಅನ್ವಯ ಆಗಬೇಕು. ಎಲ್ಲ ಹಬ್ಬಗಳಿಗೂ ಅನ್ವಯ ಆಗಬೇಕು, ಹೊಸ ವರ್ಷಕ್ಕೂ ಸಹ’ ಎಂದಿದ್ದಾರೆ ರಮ್ಯಾ.
ಇದನ್ನೂ ಓದಿ:ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾ ಟ್ವೀಟ್ಗೆ ಫನ್ ವರ್ಲ್ಡ್ ಮ್ಯಾನೇಜರ್ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, ರಾತ್ರಿ 10 ಗಂಟೆಯ ಬಳಿಕ ಪಟಾಕಿ ಹೊಡೆಯುವಂತಿಲ್ಲ ಮತ್ತು ಮಧ್ಯರಾತ್ರಿ ಬಳಿಕ ಧ್ವನಿ ವರ್ದಕ ಬಳಸುವಂತಿಲ್ಲ ಎಂದು. ಅಲ್ಲದೆ, ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿ ದೇವಿಯ ಮುಂದೆ ‘ಊ ಅಂಟಾವ, ಊಹೂಂ ಅಂಟಾವ’, ‘ಮಸ್ತ್ ಮಸ್ತ್ ಹುಡ್ಗಿ ಬಂದ್ಳು’ ಹಾಡು ಹಾಕುವುದು ಭಕ್ತಿಯಲ್ಲ’ ಎಂದಿದ್ದಾರೆ ನಟಿ ರಮ್ಯಾ.
ಈ ಮೊದಲು ರಮ್ಯಾ ಮಾಡಿದ್ದ ಪೋಸ್ಟ್ನಲ್ಲಿ ಫನ್ ವರ್ಲ್ಡ್ನಲ್ಲಿ ಪಟಾಕಿ ಹೊಡೆದು ಅಬ್ಬರದ ಸಂಗೀತ ಹಾಕಲಾಗಿದೆ ಎಂದು ಆರೋಪಿಸಿದ್ದರು. ಪಟಾಕಿ ಹೊಡೆಯುತ್ತಿರುವ ಹಾಗೂ ಹಾಡುಗಳನ್ನು ಹಾಕಿರುವ ವಿಡಿಯೋಗಳನ್ನು ಸಹ ರಮ್ಯಾ ಹಂಚಿಕೊಂಡಿದ್ದರು. ನಿಯಮ ಮುರಿದಿರುವ ಫನ್ ವರ್ಲ್ಡ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಹ ಅವರು ಆಗ್ರಹಿಸಿದ್ದರು. ಆದರೆ ಮಧ್ಯಾಹ್ನದ ವೇಳೆ ಫನ್ ವರ್ಲ್ಡ್ನ ಸಿಬ್ಬಂದಿ ಈ ಬಗ್ಗೆ ಸ್ಪಷ್ಟನೆ ನೀಡಿ, ನಾವು 10 ಗಂಟೆಗೆ ತಮ್ಮ ಚಟುವಟಿಕೆಯನ್ನು ಬಂದ್ ಮಾಡುತ್ತೇವೆ. ನಾವು ಯಾವುದೇ ಪಟಾಕಿ ಹೊಡೆಯುವುದಾಗಲಿ, ಧ್ವನಿ ವರ್ದಕ ಬಳಸಿದ್ದಾಗಲಿ ಮಾಡಿಲ್ಲ ಎಂದಿದ್ದರು. ಆ ಬಳಿಕ ರಮ್ಯಾ ಇದೀಗ ತಮ್ಮ ಹಿಂದಿನ ಪೋಸ್ಟ್ಗೆ ಸ್ಪಷ್ಟನೆಯನ್ನು ನೀಡಿ, ಕೆಲ ಹೊಸ ಪ್ರಶ್ನೆಗಳನ್ನು ಸಹ ಎತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Thu, 22 October 26