ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿಗೆ ಬೆದರಿಕೆ: ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ

Renukaswamy case: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ಗಳು ಇರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಮೂಡಿದ್ದು, ಆ ‘ಪ್ರಭಾವಿ’ಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿಗೆ ಬೆದರಿಕೆ: ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ
Darshan Renuka Swamy

Updated on: Jul 08, 2026 | 1:01 PM

ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ಗಳು ಇರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಮೂಡಿದ್ದು, ಆ ‘ಪ್ರಭಾವಿ’ಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ತನಿಖೆ ವೇಳೆ ಆರೋಪಿಗಳಿಂದ ಪೊಲೀಸರು ಹೇಳಿಕೆ, ಮರು ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಆದರೆ ಆರೋಪಿಗಳು ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎನ್ನಲಾಗುತ್ತಿದೆ. ಮುಖ್ಯವಾಗಿ ಪುನೀತ್ ಎಂಬ ಆರೋಪಿ, ಸಾಕ್ಷ್ಯಗಳ ಹೇಳಿಕೆಗಳನ್ನು ಬದಲಾಯಿಸಿಕೊಡುವ ‘ಡೀಲ್’ ಪಡೆದಿದ್ದ ಎನ್ನಲಾಗುತ್ತಿದೆ. ಈತ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಲೆ ನೋವಾಗಿದೆ ಎನ್ನಲಾಗಿದೆ.

ಈಗಾಗಲೇ ಆರೋಪಿಗಳ ಮೊಬೈಲ್​​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಕೆಲವೇ ದಿನಗಳಲ್ಲಿ ವರದಿ ಬರಲಿದ್ದು, ಈ ವೇಳೆ ಆರೋಪಿಗಳು ಯಾರೊಟ್ಟಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ. ಆರೋಪಿಗಳ ಬಂಧನ ಆಗುವ ಮೊದಲೇ ಅವರುಗಳು ಮೊಬೈಲ್ ಕರೆ ದಾಖಲೆಗಳು, ವಾಟ್ಸ್ ಆಪ್ ಚಾಟ್ ಇನ್ನಿತರೆ ಮಾಹಿತಿಗಳನ್ನು ಡಿಲೀಟ್ ಮಾಡಿದ್ದರು. ಫಾರೆನ್ಸಿಕ್ ತನಿಖೆಯಿಂದ ಆ ವರದಿಗಳನ್ನೆಲ್ಲ ಮರಳಿ ಪಡೆಯುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಕೆಲವರು ಕಾನ್ಫರೆನ್ಸ್ ಕಾಲ್​​ನಲ್ಲಿ ಇದ್ದರು ಎನ್ನಲಾಗುತ್ತಿದ್ದು, ಆ ಕಾಲ್​​ನಲ್ಲಿ ಆರೋಪಿಗಳ ಹೊರತಾಗಿ ಇನ್ಯಾರ್ಯಾರು ಇದ್ದರು ಎಂಬುದು ವರದಿ ಮೂಲಕ ಬಹಿರಂಗವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಸಾಕ್ಷಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ದರ್ಶನ್ ಅಭಿಮಾನಿಗಳು; ಈ ಮೂವರ ಹಿನ್ನೆಲೆ ಏನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ಪ್ರಕರಣದ 49ನೇ ಸಾಕ್ಷಿ ಆಗಿರುವ ದುರ್ಗಾ ಬಾರ್​​​ನ ಸಂದೀಪ್ ಎಂಬುವರಿಗೆ ಆಕರ್ಷ್ ಎಂಬ ವ್ಯಕ್ತಿಯಿಂದ ಕರೆ ಮಾಡಿಸಿ, ತಾವು ಹೇಳಿಕೊಟ್ಟಂತೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಬೇಕು ಎಂದು ಆರೋಪಿಗಳು ಹೇಳಿದ್ದರಂತೆ. ಆದರೆ ಸಂದೀಪ್, ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ನುಡಿಯುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ ಎಂದು ಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Wed, 8 July 26

Follow Us