
ನಟ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಅವರು ಯಾವಾಗ ಅಪ್ಡೇಟ್ ನೀಡಲಿದ್ದಾರೆ ಎಂದು ಪ್ರೇಕ್ಷಕರು ಕಾದಿದ್ದರು. ಇಂದು (ಮಾರ್ಚ್ 22) ಯುಗಾದಿ ಹಬ್ಬದ ಪ್ರಯುಕ್ತ ರಿಷಬ್ ಶೆಟ್ಟಿ ಹೊಸ ಸುದ್ದಿ ನೀಡಿದ್ದಾರೆ. ಈ ಶುಭ ದಿನದಂದು ‘ಕಾಂತಾರ 2’ (Kantara 2) ಸ್ಕ್ರಿಪ್ಟ್ ಕೆಲಸ ಆರಂಭ ಆಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಿಹಿ ಸುದ್ದಿ ನೀಡುವ ಮೂಲಕ ಅವರು ಎಲ್ಲರಿಗೂ ಯುಗಾದಿ (Ugadi 2023) ಹಬ್ಬದ ಶುಭಾಶಯ ಕೋರಿದ್ದಾರೆ. ‘ಬರವಣಿಗೆಯ ಆದಿ’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಪೋಸ್ಟರ್ ಹಂಚಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿ ಅವರು ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದಷ್ಟ ಬೇಗ ರಿಷಬ್ ಶೆಟ್ಟಿ ಶೂಟಿಂಗ್ ಆರಂಭಿಸಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ತುಳುನಾಡಿನ ಕಥೆಯುಳ್ಳ ‘ಕಾಂತಾರ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಅದು. ಅದರ ಸಕ್ಸಸ್ ಮೀಟ್ನಲ್ಲಿ ‘ಕಾಂತಾರ 2’ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು. ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಮಳೆಗಾಲದಲ್ಲಿ ‘ಕಾಂತಾರ 2’ ಚಿತ್ರದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಮಳೆಯಲ್ಲಿ ಹೆಚ್ಚಿನ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಕುರಿತು ಕೆಲವು ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಾಹಿತಿ ಬಿಟ್ಟುಕೊಟ್ಟಿದ್ದರು. ‘ಕಾಂತಾರ’ ಸಿನಿಮಾ ಸಾಧಾರಣ ಬಜೆಟ್ನಲ್ಲಿ ಸಿದ್ಧವಾಗಿತ್ತು. ಈ ಬಾರಿ ‘ಕಾಂತಾರ 2’ ಚಿತ್ರವನ್ನು ದೊಡ್ಡ ಕ್ಯಾನ್ವಾಸ್ನಲ್ಲಿ ಅವರು ನಿರ್ಮಾಣ ಮಾಡಲಿದ್ದಾರೆ.
ಇದನ್ನೂಓದಿ: ರಿಷಬ್ ಶೆಟ್ಟಿ ಮುದ್ದಿನ ಪುತ್ರಿ ರಾಧ್ಯ ಹುಟ್ಟುಹಬ್ಬ ಹೇಗಿತ್ತು? ವಿಡಿಯೋ ಹಂಚಿಕೊಂಡ ‘ಕಾಂತಾರ’ ಹೀರೋ
‘ಕಾಂತಾರ’ ಚಿತ್ರವು ಮಾಡಿದ ಸಾಧನೆಗಳು ಹಲವು. ಕೆಲವೇ ದಿನಗಳ ಹಿಂದೆ ಜೆನಿವಾದಲ್ಲಿ ಈ ಸಿನಿಮಾ ಪ್ರದರ್ಶನ ಆಯಿತು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ರೇಕ್ಷಕರನ್ನು ಈ ಚಿತ್ರ ಸೆಳೆದುಕೊಂಡಿದೆ. ಒಟಿಟಿಯಲ್ಲಿ ‘ಕಾಂತಾರ’ ಸಿನಿಮಾದ ಇಂಗ್ಲಿಷ್ ವರ್ಷನ್ ಕೂಡ ಲಭ್ಯವಿದೆ. ಈಗ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ತಯಾರಿ ನಡೆದಿದೆ. ಆ ಬಗ್ಗೆ ಇತ್ತೀಚೆಗಷ್ಟೇ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಮಾಹಿತಿ ಹಂಚಿಕೊಂಡಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.