
ಎಲ್ಲಿಯೋ ಸಿಕ್ಕ ಒಂದು ಸುಂದರ ಹುಡುಗನ ಫೋಟೋ. ಅದನ್ನೇ ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಂಡು ಪ್ರೀತಿಸೋ ಮುಗ್ಧ ಹುಡುಗಿ. ಜೀವನ ಕಳೆದರೆ ಈ ಹುಡುಗನ ಜೊತೆಯೇ ಕಳೆಯಬೇಕು ಎಂದು ಆಕೆ ಆಗಲೇ ಮನಸ್ಸಿನಲ್ಲೇ ನಿರ್ಧರಿಸಿಬಿಡುತ್ತಾಳೆ. ಚಿತ್ರವಿಚಿತ್ರ ಎನಿಸುವ ವಿಧಿಯ ಆಟ ನೋಡಿ, ಆ ಹುಡುಗಿ ಮುಂದೆ ಅದೇ ಹುಡುಗನನ್ನು ಪ್ರೀತಿಸಿ ಮದುವೆ ಕೂಡ ಆಗುತ್ತಾಳೆ. ಕೇಳಲು ಯಾವುದೋ ಸಿನಿಮಾದ ರೋಮ್ಯಾಂಟಿಕ್ ಕಥೆಯಂತೆ ಅನಿಸಬಹುದು. ಇತ್ತೀಚೆಗೆ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ ಜಾನಕಮ್ಮನವರ ಬಾಳಿನಲ್ಲಿ ಇಂಥದ್ದೊಂದು ಅಪರೂಪದ, ಸುಂದರ ಪ್ರೇಮಕಥೆ ಇತ್ತು ಎಂಬ ವಿಷಯ ಇಂದಿನ ತಲೆಮಾರಿನ ಅನೇಕರಿಗೆ ತಿಳಿದೇ ಇಲ್ಲ. ಜಾನಕಮ್ಮ (S Janaki) ಜನ್ಮ ಜನ್ಮಾಂತರದ ಒಡನಾಡಿಯಂತೆ ಪ್ರೀತಿಸಿದ ಆ ‘ರಾಜಕುಮಾರ’ನ ಜೊತೆಗಿನ ಲವ್ ಸ್ಟೋರಿ ಇಲ್ಲಿದೆ.
ನಾವು ಮನಸ್ಸಿನಿಂದ ಏನನ್ನಾದರೂ ಪ್ರಾಮಾಣಿಕವಾಗಿ ಬಯಸಿದರೆ, ಅದನ್ನು ನಮಗೆ ತಲುಪಿಸಲು ಇಡೀ ವಿಶ್ವವೇ ಸಹಾಯ ಮಾಡುತ್ತದೆ ಎಂಬ ಮಾತಿದೆ. ಈ ಮಾತು ಗಾನಕೋಕಿಲೆ ಎಸ್. ಜಾನಕಿ ಅವರ ಬಾಳಿನಲ್ಲಿ ಅಕ್ಷರಶಃ ನಿಜವಾಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
‘ನಮ್ಮದು ನಿಜಕ್ಕೂ ಒಂದು ಸುಂದರ ಪ್ರೇಮ ವಿವಾಹ. ನಾನು ಹೈದರಾಬಾದ್‌ನಲ್ಲಿ ನನ್ನ ಚಿಕ್ಕಪ್ಪ ಚಂದ್ರಶೇಖರ್ ಅವರೊಂದಿಗೆ ಇರುತ್ತಿದ್ದೆ. ಅವರು ನಾಟಕಗಳಲ್ಲಿ ನಟಿಸುತ್ತಿದ್ದರು. ನಾಟಕದ ಮೇಕಪ್ ಬದಲಾಯಿಸುವ ವಿರಾಮದ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಲು ನಾನು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಹಾಡುತ್ತಿದ್ದೆ. ಒಂದು ದಿನ, ನನ್ನ ಚಿಕ್ಕಪ್ಪನ ಜೇಬಿನಿಂದ ರಾಮ್ ಪ್ರಸಾದ್ ಅವರ ಫೋಟೋವೊಂದು ಕೆಳಗೆ ಬಿದ್ದಿತು. ನಾನು ಯಾರಿಗೂ ತಿಳಿಯದಂತೆ ಆ ಫೋಟೋವನ್ನು ಎತ್ತಿ ಬಚ್ಚಿಟ್ಟುಕೊಂಡೆ. ಆ ಫೋಟೋ ನೋಡಿದ ಕ್ಷಣದಲ್ಲೇ ನಾನು ಅವರನ್ನು ಪ್ರೀತಿಸಲು ಶುರು ಮಾಡಿದ್ದೆ. ನಮ್ಮಿಬ್ಬರ ನಡುವೆ ಜನ್ಮ ಜನ್ಮಾಂತರದ ಅಪರಿಚಿತ ಸಂಬಂಧವಿದ್ದಂತೆ ನನಗೆ ಭಾಸವಾಗಿತ್ತು’ ಎಂದು ಜಾನಕಮ್ಮ ನೆನಪಿಸಿಕೊಂಡಿದ್ದರು.
ಅದಾದ ಕೆಲವು ದಿನಗಳ ನಂತರ, ಚಿಕ್ಕಪ್ಪನ ಮೂಲಕವೇ ರಾಮ್ ಪ್ರಸಾದ್ ಅವರ ಪರಿಚಯ ಜಾನಕಮ್ಮ ಅವರಿಗೆ ಆಯಿತು. ಜಾನಕಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ರಾಮ್ ಪ್ರಸಾದ್, ‘ಈ ಹುಡುಗಿ ಕೇವಲ ನಾಟಕಗಳಲ್ಲಿ ಹಾಡುವುದಕ್ಕೆ ಸೀಮಿತವಾಗಬಾರದು. ಸಿನಿಮಾಗಳಲ್ಲಿ ಇವರಿಗೆ ದೊಡ್ಡ ಅವಕಾಶಗಳು ಸಿಗಬೇಕು. ಭವಿಷ್ಯದಲ್ಲಿ ಇಡೀ ದೇಶವೇ ಹೆಮ್ಮೆಪಡುವ ಗಾಯಕಿಯಾಗುತ್ತಾಳೆ’ ಎಂದು ಭವಿಷ್ಯ ನುಡಿದಿದ್ದರು. ರಾಮ್ ಪ್ರಸಾದ್ ಅವರಿಗೆ ಜಾನಕಿ ಅವರು ಹಾಡುವ ಪ್ರತಿಯೊಂದು ಹಾಡೂ ಇಷ್ಟವಾಗುತ್ತಿತ್ತು. ಅದರಲ್ಲಿಯೂ ‘ರಸಿಕಾ ಬಾಲಂ’ ಎಂಬ ಹಾಡು ಅವರ ಆಲ್‌ಟೈಮ್ ಫೇವರಿಟ್ ಆಗಿತ್ತು. ಆ ಪ್ರೀತಿ ಮತ್ತು ಪ್ರೋತ್ಸಾಹದ ಜರ್ನಿ ಮುಂದೆ 1959ರಲ್ಲಿ ಇವರಿಬ್ಬರ ಮದುವೆಯಾಗಿ ಬದಲಾಯಿತು.
ಇದನ್ನೂ ಓದಿ: ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ
‘ನಾನು ರೆಕಾರ್ಡಿಂಗ್‌ಗೆ ಹೋದಾಗಲೆಲ್ಲಾ ಅವರು ನನ್ನನ್ನು ಒಂದೇ ಒಂದು ದಿನವೂ ಒಂಟಿಯಾಗಿ ಕಳುಹಿಸಲಿಲ್ಲ. ತಮ್ಮ ಇಡೀ ಜೀವನವನ್ನು ನನಗಾಗಿ ಮತ್ತು ನನ್ನ ಸಂಗೀತ ಸಾಧನೆಗಾಗಿ ಮುಡಿಪಾಗಿಟ್ಟರು. ಅವರ ಆ ಬೆಂಬಲವಿಲ್ಲದಿದ್ದರೆ ನಾನು ಇಂದು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ’ ಎಂದು ಜಾನಕಮ್ಮ ಭಾವುಕರಾಗಿ ಹೇಳಿದ್ದರು. 1997ರಲ್ಲಿ ರಾಮ್ ಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾದರು. ಈ ದಂಪತಿಗೆ ಮುರಳಿ ಕೃಷ್ಣ ಹೆಸರಿನ ಮಗ ಇದ್ದರು. ಈ ವರ್ಷ ಜನವರಿಯಲ್ಲಿ ಮುರಳಿ ಕೃಷ್ಣ ಕೂಡ ಕೊನೆಯುಸಿರೆಳೆದಿದ್ದರು.
ಪ್ರಶ್ನೆ: ಎಸ್ ಜಾನಕಿ ನಿಧನ ಹೊಂದಿದ್ದು ಎಲ್ಲಿ, ಯಾವಾಗ?
ಉತ್ತರ: ಜುಲೈ 11ರಂದು ಮೈಸೂರಿನಲ್ಲಿ ನಿಧನ ಹೊಂದಿದರು.
ಪ್ರಶ್ನೆ: ಎಸ್. ಜಾನಕಿಗೆ ಎಷ್ಟು ವರ್ಷ ವಯಸ್ಸಾಗಿತ್ತು?
ಉತ್ತರ: ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು
ಪ್ರಶ್ನೆ: ಜಾನಕಿ ಎಷ್ಟು ಹಾಡುಗಳನ್ನು ಹಾಡಿದ್ದರು?
ಉತ್ತರ: ಜಾನಕಿ ಅವರು 20ಕ್ಕೂ ಅಧಿಕ ಭಾಷೆಗಳಲ್ಲಿ, 40 ಸಾವಿರ ಹಾಡುಗಳನ್ನು ಹಾಡಿದ್ದರು.
Published On - 11:51 am, Mon, 13 July 26