ನಟ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹಗಲಿರುಳು ಎನ್ನದೇ ಅವರು ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಜುಲೈ 28ರಂದು ಅದ್ದೂರಿಯಾಗಿ ‘ವಿಕ್ರಾಂತ್ ರೋಣ’ (Vikrant Rona) ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಜುಲೈ 25ರಂದು ಮುಂಬೈನಲ್ಲಿ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆದಿದೆ. ಅದರಲ್ಲಿ ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ಭಾಗವಹಿಸಿದ್ದು ವಿಶೇಷ. ಅದರಲ್ಲೂ ಕಿಚ್ಚ ಸುದೀಪ್ ಅವರ ಆಪ್ತ ಸ್ನೇಹಿತ ಸಲ್ಮಾನ್ ಖಾನ್ (Salman Khan) ಅವರು ಈ ಕಾರ್ಯಕ್ರಮಕ್ಕೆ ಬಂದು ಸ್ಟಾರ್ ಮೆರುಗು ಹೆಚ್ಚಿಸಿದರು. ಈ ವೇಳೆ ಸುದೀಪ್ ಜೊತೆಗಿನ ಸ್ನೇಹದ ಬಗ್ಗೆ ಸಲ್ಲು ಮಾತನಾಡಿದರು.
ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ನಡುವೆ ಒಂದಷ್ಟು ವರ್ಷಗಳಿಂದ ಸ್ನೇಹ ಮನೆ ಮಾಡಿದೆ. ಅನೇಕ ಸಂದರ್ಭಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಿದೆ. ಪರಸ್ಪರ ಪರಿಚಯ ಬೆಳೆಯುವುದಕ್ಕಿಂತ ಮನ್ನವೇ ಅವರಿಬ್ಬರ ನಡುವೆ ಕೆಲಸ ಸಾಮ್ಯತೆಗಳು ಕಾಣಿಸಿದ್ದವು ಎಂಬುದನ್ನು ಸಲ್ಲು ಹೇಳಿದ್ದಾರೆ. ‘ಸುದೀಪ್ ಅವರ ‘ಹುಚ್ಚ’ ಚಿತ್ರ ಮಾಡಿದರು. ನಾನು ‘ತೇರೆ ನಾಮ್’ ಮಾಡಿದೆ. (ಈ ಎರಡೂ ಸಿನಿಮಾಗಳು ತಮಿಳಿನ ‘ಸೇತು’ ಚಿತ್ರದ ರಿಮೇಕ್). ನಾವಿಬ್ಬರೂ ಬಿಗ್ ಬಾಸ್ ನಿರೂಪಣೆ ಮಾಡಿದ್ದೇವೆ’ ಎಂದು ಸಲ್ಲು ಹೇಳಿದ್ದಾರೆ.
2019ರಲ್ಲಿ ಬಂದ ‘ದಬಂಗ್ 3’ ಚಿತ್ರದಲ್ಲಿ ಸುದೀಪ್ ಮತ್ತು ಸಲ್ಮಾನ್ ಖಾನ್ ಅವರು ತೆರೆಹಂಚಿಕೊಂಡರು. ಅದನ್ನು ಕೂಡ ವೇದಿಕೆಯಲ್ಲಿ ಸಲ್ಲು ನೆನಪು ಮಾಡಿಕೊಂಡರು. ‘ನಾನು ಸುದೀಪ್ ಅವರ ಕೆಲಸಗಳನ್ನು ನೋಡಿದ್ದೇನೆ. ಅವರು ಅದ್ಭುತ ನಟ. ನಾನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಹಾಯ ಮಾಡುತ್ತೇನೆ ಎಂಬುದಲ್ಲ. ಅವರು ಅತ್ಯುತ್ತಮ ಸಿನಿಮಾ ಮಾಡಿದಾಗ ಮಾತ್ರ ನಾನು ಬೆಂಬಲ ನೀಡಲು ಸಾಧ್ಯ. ನಾನು ಅವರಿಗೆ ಸಪೋರ್ಟ್ ಮಾಡ್ತೀನಿ ಅಂತ ಅವರು ತಿಳಿದುಕೊಂಡಿದ್ದಾರೆ. ಅದರೆ ಅದು ನಿಜವಲ್ಲ. ಅವರೇ ನನಗೆ ಸಪೋರ್ಟ್ ಮಾಡುತ್ತಿದ್ದಾರೆ’ ಎಂಬುದು ಸಲ್ಮಾನ್ ಖಾನ್ ಮಾತು.
‘ವಿಕ್ರಾಂತ್ ರೋಣ’ ಚಿತ್ರವನ್ನು ಸಲ್ಮಾನ್ ಖಾನ್ ಅವರು ಹಿಂದಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ನಟಿಸಿದ್ದಾರೆ. ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ ಮುಂತಾದವರು ಕೂಡ ಪ್ರೀ-ರಿಲೀಸ್ ಇವೆಂಟ್ಗೆ ಆಗಮಿಸಿ ಸುದೀಪ್ಗೆ ಶುಭ ಹಾರೈಸಿದ್ದಾರೆ.