ಸ್ಯಾಂಡಲ್ವುಡ್ನಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ಗುರುವಾರ (ಸೆ.30) ಸಾವನ್ನಪಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಬಾಯ್ಫ್ರೆಂಡ್ ವಿವೇಕ್ ಜೊತೆ ಅವರು ವಾಸವಾಗಿದ್ದರು ಎನ್ನಲಾಗುತ್ತಿದೆ. ಆದರೆ ತಮ್ಮ ಮಗಳು ಒಬ್ಬಳೇ ಇದ್ದಳು ಎಂದು ಸವಿ ಪೋಷಕರು ಹೇಳುತ್ತಿದ್ದಾರೆ. ಈಗ ಸವಿ ಅಂತ್ಯಸಂಸ್ಕಾರ ನೆರವೇರಿದೆ. ಇದರ ನಂತರದಲ್ಲಿ ವಿವೇಕ್ ವಿರುದ್ಧ ಸವಿ ತಂದೆ ಪ್ರಭು ಆಕ್ರೋಶ ಹೊರ ಹಾಕಿದ್ದಾರೆ.
‘ನನ್ನ ಪುತ್ರಿ ವಿವಾಹವಾಗುವುದಾಗಿ ವಿವೇಕ್ ಒತ್ತಡ ಹಾಕುತ್ತಿದ್ದ. ನನ್ನ ಮಗಳ ಸ್ನೇಹ ಬೆಳಸುವುದಕ್ಕೆ ವಿವೇಕ್ ಯಾರು? ನನ್ನ ಮಗಳನ್ನ ವಿವಾಹವಾಗಲು ಬ್ಯಾಕ್ಗ್ರೌಂಡ್ ಏನು? ವಿವೇಕ್ ನನ್ನ ಮಗಳ ಬ್ರೈನ್ ವಾಶ್ ಮಾಡಿದ್ದಾನೆ. ದೊಡ್ಡ ಮಗಳ ಮದುವೆಯಾಗಿ ಒಂದು ತಿಂಗಳಾಗಿದೆ. ಹೀಗಿರುವಾಗ ಮತ್ತೊಂದು ಮದುವೆ ಹೇಗೆ ಸಾಧ್ಯ? ಮಗಳ ಬಳಿ ಇದ್ದ ಹಣ ಎಲ್ಲೋ ಹೂಡಿಕೆ ಮಾಡಿದ್ದಾರೆ. 5 ಲಕ್ಷ ಹಣವನ್ನು ಅವರು ಎಲ್ಲಿಯೋ ಹೂಡಿಕೆ ಮಾಡಿದ್ದಾರೆ. ನನ್ನ ಮಗಳ ಸಾವಿನ ಬಗ್ಗೆ ತನಿಖೆ ಆಗಲಿ’ ಎಂದು ಪ್ರಭು ಆಗ್ರಹಿಸಿದ್ದಾರೆ.
ಹುಟ್ಟೂರಲ್ಲಿ ಅಂತ್ಯಸಂಸ್ಕಾರ
ಸ್ವಗ್ರಾಮ ಅಂದಗೋವೆಯಲ್ಲಿ ಸವಿ ಅಂತಿಮ ವಿಧಿವಿಧಾನ ನಡೆದಿದೆ. ಸವಿಗೆ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಸಂಪ್ರದಾಯದ ಪ್ರಕಾರ ಸವಿಗೆ ಮದುವೆ ಶಾಸ್ತ್ರ ಮಾಡಲಾಗಿದೆ. ಬಾಳೆಯ ದಿಂಡನ್ನು ಮಧುಮಗನಂತೆ ಅಲಂಕರಿಸಲಾಗಿತ್ತು. ಸವಿ ಪಾರ್ಥಿವ ಶರೀರಕ್ಕೂ ವಧುವಿನಂತೆ ಶೃಂಗಾರ ಮಾಡಲಾಗಿತ್ತು. ನಂತರ ಮಗಳ ಪಾರ್ಥಿವ ಶರೀರಕ್ಕೆ ತಾಯಿ ತಾಳಿ ಕಟ್ಟಿದ್ದಾರೆ. ಸವಿ ಮಾದಪ್ಪ ಆತ್ಮಕ್ಕೆ ಮೋಕ್ಷ ಸಿಗಲು ವಿವಾಹ ಶಾಸ್ತ್ರ ನೆರವೇರಿಸಲಾಗಿದೆ. ವಿವಾಹ ಶಾಸ್ತ್ರದ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಏನು?