ನಟ ಶಶಿಕುಮಾರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಈಗ ಅವರು ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮಗ ಆದಿತ್ಯ ಅವರು ನಟನಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಅವರು ಹೀರೋ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಆಗಿದೆ. ಈ ಚಿತ್ರಕ್ಕೆ ‘ರಾಶಿ’ ಎನ್ನುವ ಟೈಟಲ್ ಇಡಲಾಗಿದೆ.
ಧುವನ್ ಫಿಲ್ಮ್ಸ್ ಲಾಂಛನದಲ್ಲಿ ಅಖಿಲೇಶ್ ‘ರಾಶಿ’ ಸಿನಿಮಾ ನಿರ್ಮಾಣ ಆಗುತ್ತಿದ್ದು, ವಿಜಯ್ ಪಾಳೇಗಾರ್ ನಿರ್ದೇಶನ ಮಾಡುತ್ತಿದ್ದಾರೆ. ಲವ್ಸ್ಟೋರಿ ಕಥಾ ಹಂದರದ ಈ ಚಿತ್ರಕ್ಕೆ ಹಲವು ಗಣ್ಯರು ಸಾಥ್ ನೀಡಿದ್ದಾರೆ. ಆದಿತ್ಯ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ ಅನ್ನೋದು ವಿಶೇಷ. ಚಿತ್ರದ ನಾಯಕಿ ಆಗಿ ಸಮೀಕ್ಷಾ ನಟಿಸುತ್ತಿದ್ದಾರೆ.
ನಟ ಶಶಿಕುಮಾರ್, ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್.ಚಂದ್ರಶೇಖರ್, ಬೆಂಗಳೂರು ಪೊಲೀಸ್ ಉಪ ಆಯುಕ್ತ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್. ಚಿದಂಬರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಜೊತೆಗೆ ಆದಿತ್ಯಗೆ ಶುಭಕೋರಿದ್ದಾರೆ.
ಆದಿತ್ಯ ಶಶಿಕುಮಾರ್ ಅವರು ಹೀರೋ ಆಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಈ ಚಿತ್ರದ ಬಗ್ಗೆ ಅವರಿಗೆ ನಂಬಿಕೆ ಇದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ಅವರು ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ‘ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು’ ಎಂದು ಮನವಿ ಮಾಡಿದರು.
ಇದನ್ನೂ ಓದಿ: ‘ಕಾದಾಡಿ’ ಸಿನಿಮಾದ ಐಟಂ ಸಾಂಗ್ನಲ್ಲಿ ಆದಿತ್ಯ ಶಶಿಕುಮಾರ್, ಸೋನಿ ಸಖತ್ ಡ್ಯಾನ್ಸ್
ಅಖಿಲೇಶ್ ನಿರ್ಮಾಣ ಮಾಡುವುದರ ಜೊತೆಗೆ ಚಿತ್ರಕ್ಕೆ ಕಥೆ ಕೂಡ ಅವರದ್ದೇ. ಚಿತ್ರಕ್ಕೆ ಗೀತರಚನೆ ಮಾಡಿರುವ ವಿಜಯ್ ಪಾಳೇಗಾರ ಅವರು ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಈ ಮೊದಲು ‘ಟ್ರಿಗರ್’ ಹೆಸರಿನ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.