ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಇಂದು (ಮೇ 20) ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ, ತಮಿಳುನಾಡು ಸಿಎಂ ಸ್ಟಾಲಿನ್, ಇನ್ನೂ ಹಲವು ರಾಜಕೀಯ ಮುಖಂಡರು, ಧುರಿಣರು ಹಾಜರಿದ್ದ ಅದ್ಧೂರಿ ಸಮಾರಂಭದಲ್ಲಿ ಸಿದ್ದರಾಮಯ್ಯ ಹಾಗೂ ಅವರೊಟ್ಟಿಗೆ ಡಿಕೆ ಶಿವಕುಮಾರ್ ಇನ್ನಿತರೆ ಕೆಲವು ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಸಮಾರಂಭದಲ್ಲಿ ಕೆಲವು ಸಿನಿಮಾ ತಾರೆಯರು ಸಹ ಭಾಗಿಯಾಗಿದ್ದರು. ನಟ ಶಿವರಾಜ್ ಕುಮಾರ್ (Shiva Rajkumar), ಗೀತಾ ಶಿವರಾಜ್ಕುಮಾರ್ (Geetha Shivarajkumar) ಸಹ ಭಾಗಿಯಾಗಿ ನೂತನ ಸಿಎಂ ಹಾಗೂ ಸಚಿವರಿಗೆ ಶುಭ ಹಾರೈಸಿದರು.
ಹೊಸ ಸರ್ಕಾರ ರಚನೆ ಆಗಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವರಾಜ್ಕುಮಾರ್, ”ಜನರು ಬದಲಾವಣೆ ಬೇಕೆಂಬ ಆಸೆಯಿಂದ ಮತ ಹಾಕಿದ್ದಾರೆ ಅಂತೆಯೇ ಬದಲಾವಣೆ ಆಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ದೇವರು ಅವರಿಗೆ (ಸರ್ಕಾರಕ್ಕೆ) ಶಕ್ತಿ ಕೊಡಲಿ, ಎಲ್ಲರೂ ನೂತನ ಸರ್ಕಾರಕ್ಕೆ ಬೆಂಬಲ, ಸಹಕಾರ ನೀಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ.
ಮುಂದುವರೆದು, ”ಜನರು ದೊಡ್ಡದಾಗಿ ಬೆಂಬಲ ನೀಡಿದ್ದಾರೆ. ಈಗ ಆಯ್ಕೆ ಆಗಿರುವವರು ಸಹ ಜನರು ನೀಡಿರುವ ಬೆಂಬಲಕ್ಕೆ ತಕ್ಕಂತೆ ಸರ್ಕಾರ ನಡೆಸಬೇಕು. ಜನಗಳಿಗೆ ಒಳ್ಳೆಯದಾಗಬೇಕು ಅಷ್ಟೆ” ಎಂದ ಶಿವಣ್ಣ, ತಾವು ಈ ಬಾರಿ ಪ್ರಚಾರ ಮಾಡಿರುವ ಬಗ್ಗೆ ಮಾತನಾಡಿ, ”ನನ್ನದೇನು ದೊಡ್ಡ ಕಾಣಿಕೆ ಇಲ್ಲ. ಸಣ್ಣ ಸೇವೆಯಷ್ಟೆ. ಜನರು ಕೆಲವು ನಿರೀಕ್ಷೆಗಳಿಟ್ಟುಕೊಂಡು ಸರ್ಕಾರ ತಂದಿದ್ದಾರೆ. ಆ ನಿರೀಕ್ಷೆಗಳನ್ನು ಈಡೇರಿಸಿದರೆ ಸಾಕು” ಎಂದಿದ್ದಾರೆ.
ಐದು ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ ಶಿವಣ್ಣ, ”ನನಗೆ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಾಗಲ್ಲ. ಆದರೆ ಜನರಿಗೆ ಒಳ್ಳೆಯದಾಗಬೇಕು ಆ ರೀತಿಯ ಕೆಲಸಗಳನ್ನು ಸರ್ಕಾರ ಖಂಡಿತ ಮಾಡುತ್ತದೆ ಎಂಬ ವಿಶ್ವಾಸವಿದೆ. ಜನರ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ದೇವರು ನೀಡಲಿ” ಎಂಬುದು ನನ್ನ ಹಾರೈಕೆ ಎಂದಿದ್ದಾರೆ.
ಶಿವರಾಜ್ ಕುಮಾರ್ ಅವರು ಈ ಬಾರಿ ಸಕ್ರಿಯವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಸಹೋದರ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಪರವಾಗಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಪ್ರಚಾರ ಮಾಡಿದ್ದರು. ಆ ಬಳಿಕ ಇನ್ನೂ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಿವಣ್ಣ-ಗೀತಕ್ಕ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರ ಪರವಾಗಿಯೂ ವರುಣಾನಲ್ಲಿ ಶಿವಣ್ಣ ಪ್ರಚಾರ ಮಾಡಿದ್ದರು.
ಶಿವಣ್ಣ ಪ್ರಚಾರ ಮಾಡಿದ ಹಲವು ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯಕ್, ಸಿದ್ದರಾಮಯ್ಯ ಅವರುಗಳು ಗೆದ್ದಿದ್ದಾರೆ. ಜಗದೀಶ್ ಶೆಟ್ಟಿ, ಅಶೋಖ್ ಖೇಣಿ, ಕಿಮ್ಮನೆ ರತ್ನಾಕರ್, ಸತೀಶ್ ಕೃಷ್ಣ ಸೈಲ್ ಸೋತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ