ಕರ್ನಾಟಕ ವಿಧಾನಸಭೆ ಚುನಾವಣೆ 2023ರ (Karnataka Assembly Election 2023) ಫಲಿತಾಂಶ ನಿನ್ನೆ (ಮೇ 13) ಹೊರಬಿದ್ದಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಕಾಂಗ್ರೆಸ್ಗೆ ದೊಡ್ಡ ಬಹುಮತ ಪ್ರಾಪ್ತವಾಗಿದೆ. ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದರೆ ಬಿಜೆಪಿ ಪಕ್ಷವು 66 ಕ್ಷೇತ್ರಗಳಲ್ಲಷ್ಟೆ ಗೆಲ್ಲಲು ಶಕ್ತವಾಗಿದೆ. ಇದೀಗ ಹೊಸ ಸರ್ಕಾರ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿರುವ ವೇಳೆಯಲ್ಲಿ ಸ್ಯಾಂಡಲ್ವುಡ್ನ ಹಲವು ನಿರ್ದೇಶಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
”ಈಗ ಇಷ್ಟು. ಗೆದ್ದವರು ಬೀಗಬೇಡಿ. ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ. ತಬ್ಭಲಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ. ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಮೇಲಿನವರನ್ನು ಅಧಿಕಾರದಿಂದ ದೂರವಿಡಿ. ಕನಿಷ್ಠ 10% ಭ್ರಷ್ಟಾಚಾರದಿಂದಲಾದರೂ ದೂರವಿರಿ. ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ. ಗೆದ್ದವರು ಭಯಂಕರ ವಿನಯವಂತರಾಗಿರಿ” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
”ಚುನಾವಣೆ ಮುಗಿದು ಫಲಿತಾಂಶವೂ ಬಂದಾಯಿತು. ಇನ್ನೇನಿದ್ರು ಹೊಸ ಸರ್ಕಾರದ ಆಟ. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಎಲ್ಲರ ಬದುಕು ಅತಂತ್ರವಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಕರುನಾಡಿನ ಜನ ಸಂಪೂರ್ಣ ಬಹುಮತವನ್ನು ಒಂದು ಪಕ್ಷಕ್ಕೆ ನೀಡಿ ತಾವು ಪ್ರಜ್ಞಾವಂತರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೆದ್ದವರಿಗೆಲ್ಲ ಶುಭಾಶಯಗಳು, ಸೋತವರು ಆತ್ಮ ವಿಮರ್ಶೆ ಮಾಡಿಕೊಳ್ಳವ ಕಾಲ. ಸಂಪೂರ್ಣ ಬಹುಮುತ ಪಡೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು. ಸಾಮಾನ್ಯ ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಉತ್ತಮ ಆಡಳಿತ ನೀಡಿ” ಎಂದಿದ್ದಾರೆ ನಟ ದುನಿಯಾ ವಿಜಯ್.
ಧರ್ಮಾಂಧತೆ ಹಾಗೂ ದ್ವೇಷವನ್ನು ಒದ್ದು ಹೊರಗೆ ಓಡಿಸಿದ ಕರ್ನಾಟಕದ ಜನತೆಗೆ ಧನ್ಯವಾದ. ಚಕ್ರವರ್ತಿ ಬತ್ತಲಾಗಿದ್ದಾನೆ” ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಿಜೆಪಿ ಮೂಟೆಗಳನ್ನು ಬಂಡಿಯ ಏರಿಕೊಂಡು ಬೆನ್ನುಹಾಕಿ ಹೋಗುತ್ತಿರುವ ಯೋಗಿ ಆದಿತ್ಯನಾಥ್ ಹಾಗೂ ಮೋದಿಯ ಚಿತ್ರವನ್ನು ಪ್ರಕಾಶ್ ರೈ ಹಂಚಿಕೊಂಡಿದ್ದಾರೆ.
ಮಡಚಿದ್ದ ಕೈ ಮೇಲೇದ್ದಿದೆ..
ಅರಳಿದ ತಾವರೆ ಮುದುಡಿದೆ…
ತೆನೆ ಹೊತ್ತ ಮಹಿಳೆಗೆ ಕಣವಿಲ್ಲ..
ಪ್ರಜೆಗಳಿಗೆ ರಾಜಕೀಯ ನೆಡೆ ಬೇಕು..
ಪ್ರಜಾಕೀಯ ನುಡಿ ಬೇಕಿಲ್ಲ…
ಇತರೆಯವರನ್ನ ಕೇಳೋರಿಲ್ಲ…
ರೆಸಾರ್ಟ್ ರಾಜಾಕೀಯ ನೆಡೆಯೋಲ್ಲ..
ಸಾಮಾಜಿಕ ಜಾಲತಾಣ ನಿಜವಲ್ಲ..
ಯಾವುದೇ ಪಕ್ಷವಿರಲಿ..
ಕರ್ನಾಟಕ ಅಭಿವೃದ್ಧಿಯಾಗಲಿ…
ಶುಭಾಶಯಗಳು
ಎಂದು ಚುಟುಕಾಗಿ ಕವಿತೆ ಬರೆದಿದ್ದಾರೆ ನಿರ್ದೇಶಕ ಸಿಂಪಲ್ ಸುನಿ
ಬಸವಣ್ಣ ಹುಟ್ಟಿದ ನಾಡಿದು. Thank you ಕರ್ನಾಟಕ ಹಾಗೂ ಕರುನಾಡಿನ ಜನತೆಗೆ, ಅವರ ಜವಾಬ್ದಾರಿಯುತ ನಿರ್ಣಯಕ್ಕೆ. ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಕೇವಲ 5 ವರ್ಷಗಳಿಗೆ ಮಾತ್ರ ಎನ್ನುವುದು ಆ ಪಕ್ಷದವರು ಮರೆಯದಿರಲಿ. ಜನಪರ, ಜನರ ಆಶಯಗಳಿಗೆ ಸ್ಪಂದಿಸದಿದ್ದರೆ, ಜನರೊಂದಿಗೆ ಸಂಯಮದಿಂದ ವರ್ತಿಸದಿದ್ದರೆ ಈ ಹಿಂದಿನ ಸರ್ಕಾರಕ್ಕೆ ಬಂದ ಫಲಿತಾಂಶವೇ ಮುಂದೆ ಕಾಂಗ್ರೆಸ್‌ಗು ಬರಬಹುದು ಎಂದು ನೆನಪಿನಲ್ಲಿರಿಸಿಕೊಳ್ಳಲಿ. ಜವಾಬ್ದಾರಿಯುತವಾಗಿ ಕರ್ನಾಟಕವನ್ನು ಮುನ್ನಡೆಸಲಿ. ಹೊಸ ಸರ್ಕಾರದ ಬಳಿ ಈಗಲೇ ಒಂದು ಬೇಡಿಕೆ, ದಯವಿಟ್ಟು ಎಲ್ಲಾ ಒಳ್ಳೆಯ ಕನ್ನಡ ಸಿನೆಮಾಗಳಿಗೆ ಸಂಪೂರ್ಣವಾಗಿ (ರಾಜ್ಯ ಸರ್ಕಾರದ ಪಾಲಿನದು) ಮನರಂಜನಾ ತೆರಿಗೆಯಿಂದ ವಿನಾಯಿತಿ ಕೊಡಿ. ಟಿಕೇಟ್ ರೇಟ್ ಕಡಿಮೆಯಾಗಿ ಥಿಯೇಟರ್ ಕಡೆಗೆ ಜನ ಬರುವಂತಾಗಲಿ” ಎಂದಿರುವವರು ನಿರ್ದೇಶಕ ಮಂಸೋರೆ.
”ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ “ಡೊಳ್ಳು”ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ. ಸಿದ್ದರಾಮಯ್ಯ ಸರ್ ಗೆ ಒಂದೇಒಂದು ಬಾರಿ ಕರೆ ಮಾಡಿದ್ದೆವು. “ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ” ಎಂದು ಬಿಜೆಪಿ ಸರ್ಕಾರ ತೊಲಗಿದ್ದಕ್ಕೆ ಸಂತೋಶ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಪವನ್ ಒಡೆಯರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sun, 14 May 23