
ಕಮಲ್ ಹಾಸನ್ (Kamal Haasan) ಕನ್ನಡದ ಬಗ್ಗೆ ಆಡಿದ ಮಾತಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಮುಂಚೆಯೇ ಬಾಲಿವುಡ್ ಗಾಯಕ ಸೋನು ನಿಗಂ ಸಹ ಕನ್ನಡಿಗರ ಬಗ್ಗೆ ಅಗೌರವದ ಮಾತನ್ನಾಡಿದ್ದರು. ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದನೆಗೆ ಹೋಲಿಸಿದ್ದರು. ಸೋನು ನಿಗಂ ಹೇಳಿಕೆ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ದೂರಿನ ವಿರುದ್ಧ ಸೋನು ನಿಗಂ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋನು ನಿಗಂ ಮನವಿಗೆ ಸ್ಪಂದಿಸಿದ್ದ ನ್ಯಾಯಾಲವು ಸೋನು ನಿಗಂ ವಿರುದ್ಧ ಬಲವಂತದ ಪ್ರಕ್ರಿಯೆ ಬೇಡ ಎಂದಿತ್ತು. ಆದರೆ ಸೋನು ನಿಗಂ ಅವರು ಪೊಲೀಸರ ಮುಂದೆ ನೇರವಾಗಿ ಅಥವಾ ಆನ್ಲೈನ್ ಮೂಲಕ ಹೇಳಿಕೆ ದಾಖಲಿಸುವಂತೆ ಸೂಚಿಸಿತ್ತು. ಆದರೆ ಸೋನು ನಿಗಂ, ಈ ವರೆಗೆ ಹೇಳಿಕೆ ದಾಖಲಿಸಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸೋನು ನಿಗಂ ವಿಚಾರೆಣೆಗೆ ಮುಂಬೈಗೆ ಹೊರಟ ಬೆಂಗಳೂರು ಪೊಲೀಸರು
ಆವಲಹಳ್ಳಿ ಪೊಲೀಸರು, ಸೋನು ನಿಗಂ ಅವರನ್ನು ಸಂಪರ್ಕಿಸಿದ್ದು, ಪ್ರತಿಬಾರಿಯೂ ಅವರು ವಿಚಾರಣೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿಯೂ ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, ಅಧಿಕೃತವಾಗಿ ಹೇಳಿಕೆ ದಾಖಲಿಸುತ್ತಿಲ್ಲವಂತೆ. ಇದೇ ಕಾರಣಕ್ಕೆ ಆವಲಹಳ್ಳಿ ಪೊಲೀಸರು, ಈ ವಿಷಯವನ್ನು ಹೈಕೋರ್ಟ್ ಗಮನಕ್ಕೆ ತರಲು ಸಿದ್ಧವಾಗಿದ್ದು, ಪ್ರಕರಣದಲ್ಲಿ ಹೈಕೋರ್ಟ್ ಏನು ಆದೇಶ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಕಳೆದ ತಿಂಗಳು ಬೆಂಗಳೂರಿನ ಕಾಲೇಜೊಂದರಲ್ಲಿ ಲೈವ್ ಕಾರ್ಯಕ್ರಮ ನೀಡಿದ್ದ ಸೋನು ನಿಗಂ, ವಿದ್ಯಾರ್ಥಿಯೋರ್ವ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದಾಗ ಸಿಟ್ಟಾಗಿದ್ದ ಸೋನು ನಿಗಂ, ‘ಈ ರೀತಿಯ ಮನಸ್ಥಿತಿಯವರಿಂದಲೇ ಪಹಲ್ಗಾಮ್ ದಾಳಿ ನಡೆದಿದ್ದು’ ಎಂದಿದ್ದರು. ಸೋನು ನಿಗಂ ಹೇಳಿಕೆ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಪರ ಸಂಘಟನೆಗಳು ಫಿಲಂ ಚೇಂಬರ್ಗೆ ದೂರು ನೀಡಿದ್ದರು. ಒಂದು ಸಿನಿಮಾದಿಂದ ಸೋನು ನಿಗಂ ಹಾಡಿದ್ದ ಹಾಡನ್ನು ಸಹ ತೆಗೆದು ಹಾಕಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ