
ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ ‘ಸ್ಪಾರ್ಕ್’ ಸಿನಿಮಾ ತನ್ನ ಪ್ರತಿಯೊಂದು ಅಪ್‌ಡೇಟ್ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಮಾಧ್ಯಮ ಗೋಷ್ಠಿ ನಡೆಸಿ ನಟಿ ಭಾವನಾ ಅವರ ವಿಶೇಷ ಪಾತ್ರದ ಕುರಿತು ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದೆ. ಈ ವೇಳೆ ಮಾತನಾಡಿದ ನಟಿ ಭಾವನಾ, ‘ಸಿನಿಮಾದ ಶೀರ್ಷಿಕೆಗೆ ತಕ್ಕಂತೆ ಕಥೆ ಹಾಗೂ ಪ್ರತಿಯೊಂದು ಪಾತ್ರದಲ್ಲೂ ಒಂದು ವಿಶೇಷ ಸ್ಪಾರ್ಕ್ ಇದೆ’ ಎಂದು ಹೇಳಿದರು.
‘ಸವಾಲೆನಿಸುವ ಕಥೆಗಳಿದ್ದಾಗ ಮಾತ್ರ ನಾನು ನಟಿಸಲು ಒಪ್ಪಿಕೊಳ್ಳುತ್ತೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ವಿವರಿಸಿದಾಗ ಇದುವರೆಗೆ ನಾನು ಮಾಡಿರದ ವಿಭಿನ್ನ ಪಾತ್ರ ಎಂಬುದು ಅರಿವಾಯಿತು. ನಟಿಯಾಗಿ ನನ್ನ ಅಭಿನಯದ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಒದಗಿಸಿದ ನಿರ್ದೇಶಕರಿಗೆ ಧನ್ಯವಾದಗಳು. ನಿರ್ಮಾಪಕರು ಕೂಡ ಅತ್ಯಂತ ಸಮರ್ಪಣಾ ಭಾವದಿಂದ ಪ್ರತಿದಿನ ಸೆಟ್‌ಗೆ ಆಗಮಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಭಾವನಾ ತಿಳಿಸಿದರು.
ಇದೇ ವೇಳೆ ನಾಯಕ ನಟ ನಿರಂಜನ್ ಸುಧೀಂದ್ರ ಅವರನ್ನು ಶ್ಲಾಘಿಸಿದ ಭಾವನಾ, ‘ಅವರು ಕೇವಲ ಹ್ಯಾಂಡ್‌ಸಮ್ ಆಗಿ ಕಾಣುವುದು ಮಾತ್ರವಲ್ಲದೆ ನಟನೆ, ಡ್ಯಾನ್ಸ್ ಹಾಗೂ ಫೈಟ್‌ಗಳಲ್ಲಿ ಸಿದ್ಧಹಸ್ತರು. ಚಿತ್ರರಂಗದ ಭರವಸೆಯ ನಾಯಕ ನಟರಾಗುವ ಎಲ್ಲ ಲಕ್ಷಣಗಳು ಅವರಲ್ಲಿವೆ’ ಎಂದರು. ಅಲ್ಲದೆ, ಚಿತ್ರದಲ್ಲಿ ಪ್ರಮುಖ ಕಲಾವಿದರು, ತಂತ್ರಜ್ಞರು ಇರುವುದರ ಜೊತೆಗೆ ಕೌಟುಂಬಿಕ ಅಂಶಗಳು, ಉತ್ತಮ ಸಂದೇಶ ಹಾಗೂ ಪರಿಪೂರ್ಣ ಮನರಂಜನೆ ಅಡಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತರ ನಟರಾದ ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್ (ಕೇಸ್ ಆಫ್ ಕೊಂಡಾಣ ಚಿತ್ರದ ನೆನಪು ಹಂಚಿಕೊಂಡರು), ಧರ್ಮಣ್ಣ (ಇನ್ಸ್ಪೆಕ್ಟರ್ ವಿಕ್ರಮ್ ಅನುಭವ ನೆನಪಿಸಿಕೊಂಡರು), ವಿಜಯ್ ಚೆಂಡೂರ್, ಅಶ್ವಥ್ ನೀನಾಸಂ ಹಾಗೂ ಮಹಾಂತೇಶ್ ಹಿರೇಮಠ (ಆ್ಯಂಬುಲೆನ್ಸ್ ಚಾಲಕನ ಪಾತ್ರ) ತಮ್ಮ ಪಾತ್ರಗಳ ಬಗ್ಗೆ ಮತ್ತು ಭಾವನಾ ಅವರೊಂದಿಗಿನ ನಟನೆಯ ಕುರಿತು ಅನುಭವ ಹಂಚಿಕೊಂಡರು. ಚಿತ್ರದ ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ಅವರು ನಟಿ ಭಾವನಾ ಅವರ ಕಸಿನ್ ಬ್ರದರ್ ಆಗಿ ಬಣ್ಣ ಹಚ್ಚಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಫ್ರೆಶರ್ಸ್ ಡೇ ‘ಆರಂಭ್ 2026’ ಸಂಭ್ರಮ
ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ‘ಪ್ರತಿ ಪಾತ್ರಕ್ಕೂ ಸೂಕ್ತವಾದ ಕಲಾವಿದರನ್ನೇ ಆಯ್ಕೆ ಮಾಡಲಾಗಿದೆ. ಕಥೆಯಲ್ಲಿ ನಡೆಯುವ ಒಂದು ಘಟನೆಯಲ್ಲಿ ಪತ್ರಕರ್ತನಾದ ನಾಯಕನಿಗೆ ನೆರವಾಗಲು ಬರುವ ವೈದೇಹಿ ಎಂಬ ಲಾಯರ್ ಪಾತ್ರವನ್ನು ಭಾವನಾ ಅವರು ನಿರ್ವಹಿಸಿದ್ದಾರೆ’ ಎಂದರು. ಭಾವನಾ ಅವರು ಕಥೆ ಚೆನ್ನಾಗಿದ್ದಾಗ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದು ನಾಯಕ ನಟ ನಿರಂಜನ್ ತಿಳಿಸಿದರು. ತಾವು ವೈದ್ಯೆಯಾಗಿ ಅಭಿನಯಿಸಿರುವುದಾಗಿ ರಚನಾ ಇಂದರ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.