
ಕನ್ನಡ ಸಿನಿಮಾಗಳ ಮಾರುಕಟ್ಟೆ ಚಿಕ್ಕದು ಎಂದು ಹೇಳುವ ಕಾಲ ಈಗ ಉಳಿದಿಲ್ಲ. ‘ಕೆಜಿಎಫ್: ಚಾಪ್ಟರ್ 2’, ‘777 ಚಾರ್ಲಿ’, ‘ಕಾಂತಾರ’ ಮುಂತಾದ ಸಿನಿಮಾಗಳು ಚಂದನವನದ ತಾಕತ್ತು ಏನು ಎಂಬುದನ್ನು ಇಡೀ ಭಾರತಕ್ಕೆ ತಿಳಿಸಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಧೂಳೆಬ್ಬಿಸುತ್ತಿವೆ. ಮುಂಬರುವ ಚಿತ್ರಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಆರ್. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ ಚಿತ್ರ ಕೂಡ ಇದೇ ರೀತಿಯ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ‘ಕಬ್ಜ’ (Kabzaa) ರಿಲೀಸ್ ಡೇಟ್ ಇನ್ನೂ ಘೋಷಣೆ ಆಗಿಲ್ಲ. ಉತ್ತರ ಭಾರತದ ಮಂದಿ ಕೂಡ ಈ ಸಿನಿಮಾದ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಕಾದಿದ್ದಾರೆ. ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ ಅವರು ಒಟ್ಟಿಗೆ ತೆರೆ ಹಂಚಿಕೊಂಡಿರುವುದರಿಂದ ಹೈಪ್ ಜೋರಾಗಿದೆ.
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಕಬ್ಜ’ ಚಿತ್ರದ ಹೊಸ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ಭಾರತದ ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಹಾಗಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರು ‘ಕಬ್ಜ’ ಬಗ್ಗೆ ಕಾತರರಾಗಿದ್ದಾರೆ.
‘ಕಬ್ಜ’ ಟೀಸರ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಜನಮೆಚ್ಚುಗೆ ಗಳಿಸಿದೆ. ಈಗಾಗಲೇ 2.8 ಕೋಟಿಗೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. ಆ ಮೂಲಕ ‘ಕಬ್ಜ’ ಮೇಲೆ ಪ್ರೇಕ್ಷಕರ ನಿರೀಕ್ಷೆ ಎಷ್ಟಿದೆ ಎಂಬುದು ಸಾಬೀತಾಗಿದೆ. ಇದರ ಮೇಕಿಂಗ್ ‘ಕೆಜಿಎಫ್ 2’ ರೀತಿ ಇದೆ ಎಂಬ ಚರ್ಚೆ ಸಹ ಇದೆ. ಆ ಕಾರಣದಿಂದಲೂ ಭಾರಿ ಕುತೂಹಲ ಮೂಡಿದೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಆರ್. ಚಂದ್ರು ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈವರೆಗೂ ಅವರು ಮಾಡಿದ ಸಿನಿಮಾಗಳು ಒಂದಿಲ್ಲೊಂದು ರೀತಿಯಲ್ಲಿ ಗಮನ ಸೆಳೆದಿವೆ. ಆದರೆ ಇದೇ ಮೊದಲ ಬಾರಿಗೆ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಟೀಸರ್ನಲ್ಲಿ ಈಗಾಗಲೇ ಅವರ ಶ್ರಮ ಕಾಣಿಸಿದೆ. ಆದಷ್ಟು ಬೇಗ ಟ್ರೇಲರ್ ಬರಲಿ ಎಂಬುದು ಫ್ಯಾನ್ಸ್ ಬಯಕೆ.
ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರಿಬ್ಬರ ಕಾಂಬಿನೇಷನ್ ಎಂದರೆ ಸಹಜವಾಗಿಯೇ ನಿರೀಕ್ಷೆ ದೊಡ್ಡದಾಗುತ್ತದೆ. ಟೀಸರ್ ನೋಡಿದ ಮೇಲಂತೂ ಚಿತ್ರದ ಮೇಕಿಂಗ್ ಗುಣಮಟ್ಟಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲದೇ ಇನ್ನೂ ಒಂದಷ್ಟು ಭಾಷೆಗಳಿಗೆ ಈ ಚಿತ್ರ ಡಬ್ ಆಗಿ ತೆರೆಕಾಣಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.