
ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಯಶ್ ನಟನೆಯ ಈ ಸಿನಿಮಾದ ಬಿಡುಗಡೆ ದಿನಾಂಕ (Toxic Release Date) ಈಗಾಗಲೇ ಎರಡು ಬಾರಿ ಮುಂದೂಡಿಕೆ ಆಗಿತ್ತು. ಅಂತಿಮವಾಗಿ ‘ಟಾಕ್ಸಿಕ್’ ಸಿನಿಮಾವನ್ನು ಇದೇ ವರ್ಷ ಆಗಸ್ಟ್ 26ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾಗೆ ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಯಶ್ (Yash) ಜೊತೆ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿ ಹಲವರು ಅಭಿನಯಿಸುತ್ತಿದ್ದಾರೆ.
ಯಶ್ ಅವರಿಗೆ ‘ಟಾಕ್ಸಿಕ್’ ಬಹಳ ಮುಖ್ಯವಾದ ಪ್ರಾಜೆಕ್ಟ್. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಇದು. ಬಹಳ ದೊಡ್ಡ ಮಟ್ಟದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರಕ್ಕೆ ಮಾರ್ಕೆಟಿಂಗ್ ಮಾಡಲಾಗುತ್ತಿದೆ. ವಿದೇಶದ ದೊಡ್ಡ ಕಂಪನಿಗಳು ಹಾಗೂ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ವಿದೇಶದ ಮಾಧ್ಯಮಗಳಿಗೆ ಯಶ್ ಅವರು ಸಂದರ್ಶನ ನೀಡಿ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ 2 ಬಾರಿ ಈ ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆಯಿತು. ಮೊದಲ ಬಾರಿ ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದ ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. 2ನೇ ಬಾರಿ ಸಿನಿಮಾದ ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು.
‘ಟಾಕ್ಸಿಕ್’ ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ಗಳು ಧೂಳೆಬ್ಬಿಸಿವೆ. ಸಿನಿಪ್ರಿಯರ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ಹುಟ್ಟುಹಾಕಿವೆ. ಇಂಥ ಮಾಸ್ ಸಿನಿಮಾಗೆ ಮಹಿಳಾ ನಿರ್ದೇಶಕಿ ಆ್ಯಕ್ಷನ್-ಕಟ್ ಹೇಳುತ್ತಿರುವುದು ಕೂಡ ಹೈಪ್ ಹೆಚ್ಚಲು ಕಾರಣ ಆಗಿದೆ. ಚಿತ್ರದ ಬರವಣಿಗೆಯಲ್ಲಿ ಯಶ್ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್
ಪಾತ್ರವರ್ಗದ ಕಾರಣದಿಂದಲೂ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಘಟಾನುಘಟಿ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ತಾರಾ ಸುತಾರಿಯಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಶ್ ಅವರು ಎರಡು ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಸಿಕ್ಕಾಪಟ್ಟೆ ರಗಡ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:06 pm, Sun, 21 June 26