ಒಂದಾನೊಂದು ಕಾಲದಲ್ಲಿ ಆರಂಭ, ತಿರುಪತಿ ಗಿರಿವಾಸ ಶ್ರೀವೆಂಕಟೇಶ, ನೀ ಬಂದು ನಿಂತಾಗ, ವಿರಹ ನೂರು ನೂರು ತರಹ, ಸಂಗಮ ಸಂಗಮ, ಯಾವ ಜನುಮದ. ಹೀಗೆ ಹಾಡುಗಳ ಹೆಸರನ್ನು ಹೇಳುತ್ತಾ ಹೋದರೆ, ಹಾಡಿನ ಧ್ವನಿಯೇ ಮನದಲ್ಲಿ ಅನುರಣಿಸುತ್ತದೆ. ಸುಶೀಲಮ್ಮ ಅಂದರೆ ಹಾಗೆ. ಒಪ್ಪವಾಗಿ ಉಟ್ಟ ಸೀರೆ, ಹೆಗಲ ಮೇಲೆ ಹೊದ್ದುಕೊಂಡ ಸೆರಗು, ಹಣೆಯಲ್ಲಿ ಅಂದದ ತಿಲಕ, ದುಂಡಗಿನ ಕನ್ನಡಕ, ಸಣ್ಣ ನಗು. ಅವರ ವ್ಯಕ್ತಿತ್ವದಷ್ಟೇ ಸಹಜ, ಸುಂದರ, ಅವರ ಹಾಡುಗಳು.
ದಕ್ಷಿಣ ಭಾರತದ ಹಿನ್ನೆಲೆ ಗಾಯಕಿಯರ ಪಟ್ಟಿಯಲ್ಲಿ ಎಸ್. ಜಾನಕಿ, ಕೆ.ಎಸ್. ಚಿತ್ರಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ ಮೊದಲಾದವರ ಪಟ್ಟಿಯಲ್ಲಿ ಕೇಳಿಬರುವ ಮತ್ತೊಂದು ಹೆಸರು ಪಿ. ಸುಶೀಲ. ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಮಾಡಿರುವ 85 ವರ್ಷದ ಪಿ. ಸುಶೀಲ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 1935, ನವಂಬರ್ 13ರಂದು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದ ಸುಶೀಲ 1950ರಲ್ಲಿ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ, ಸಂಸ್ಕೃತ, ಸಿಂಹಳ, ಬೆಂಗಾಳಿ ಹಾಗೂ ಪಂಜಾಬಿ ಭಾಷೆಯಲ್ಲೂ ಹಾಡಿದ್ದಾರೆ. ಸಂಗೀತಕ್ಕೆ ಭಾಷೆಯ ಗಡಿ ಇಲ್ಲವೆಂಬಂತೆ ಅವರ ಸ್ವರ ಮಾಧುರ್ಯಕ್ಕೆ ಮನಸೋಲದವರಿಲ್ಲ.
ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಪಿ. ಸುಶೀಲ ರೇಡಿಯೋ ಮೂಲಕವೇ ಸಿನಿಮಾಗಳ ಹಿನ್ನೆಲೆ ಗಾಯನಕ್ಕೆ ಆಯ್ಕೆಯಾದರು. ಸಂಗೀತ ನಿರ್ದೇಶಕ ಪೆಂಡ್ಯಾಳ ನಾಗೇಶ್ವರ ರಾವ್ ಹೊಸ ಗಾಯಕಿಯ ಹುಡುಕಾಟದಲ್ಲಿದ್ದಾಗ ಆಗ ಅವರಿಗೆ ಪರಿಚಯವಾದದ್ದು ಪಿ. ಸುಶೀಲ. ನಾಗೇಶ್ವರ ರಾವ್ ಸಂಗೀತ ನಿರ್ದೇಶನದಲ್ಲೇ ಮೊದಲ ಹಾಡು ಹಾಡಿದ ಸುಶೀಲಮ್ಮ,ನಂತರ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಘಂಟಸಾಲ ಜೊತೆ ಡುಯೆಟ್ ಹಾಡು ಹಾಡಿದರು. ಇವರ ಆರಂಭದ ಹಾಡುಗಳೇ ಸುಶೀಲ ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿದವು. ಸಂಗೀತ ಸ್ವರಸಿರಿಯನ್ನು ಪಸರಿಸಿದವು. ಸುಶೀಲಮ್ಮ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವಂತಾಯಿತು.
ದಕ್ಷಿಣ ಭಾರತದ ಖ್ಯಾತ ಗಾಯಕಿ
ಗಾಯಕಿಯೊಬ್ಬರು ತಮ್ಮ ಧ್ವನಿಯ ಬೇಡಿಕೆಯನ್ನು ಉಳಿಸಿಕೊಳ್ಳುವುದು ಸವಾಲಿನ ಸಂಗತಿ. ಅದೂ ಆಗಿನ ಕಾಲಕ್ಕೆ ಜಿಕ್ಕಿ, ವಸಂತಕುಮಾರಿ, ಪಿ. ಲೀಲಾರಂತಹ ಗಾಯಕಿಯರ ನಡುವೆ ಸುಶೀಲ, ಸ್ಪಷ್ಟ ಮತ್ತು ತೀಕ್ಷ್ಣ ಧ್ವನಿಯೊಂದಿಗೆ ತಮ್ಮ ಸ್ವಂತಿಕ ಛಾಪು ಮೂಡಿಸಿದರು. ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಬಳಸಿ ಸಿನಿಮಾ ಕ್ಷೇತ್ರದಲ್ಲೂ ಮಿಂಚಿದರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಖ್ಯಾತನಾಮರಾದರು. ವಿಶ್ವನಾಥನ್-ರಾಮಮೂರ್ತಿ, ರಾಜನ್-ನಾಗೇಂದ್ರ, ಜಿ. ದೇವರಾಜನ್, ಎಂ.ಕೆ. ಅರ್ಜುನನ್, ಇಳಯರಾಜ, ಎ.ಆರ್. ರಹಮಾನ್, ಹಂಸಲೇಖ ಮೊದಲಾದ ಸಂಗೀತ ನಿರ್ದೇಶಕರಿಗೆ ನೆಚ್ಚಿನ ಧ್ವನಿಯಾದರು. ಘಂಟಸಾಲ, ಟಿ.ಎಮ್. ಸೌಂದರರಾಜನ್, ಪಿ.ಬಿ. ಶ್ರೀನಿವಾಸ್, ಕೆ.ಜೆ. ಏಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆಗೆ ನೂರಾರು ಹಾಡುಗಳನ್ನು ಹಾಡಿದರು. ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ ಜೋಡಿಯ ಗಾಯನ ಮರೆಯುವಂತಿಲ್ಲ.
3 ಭಾಷೆಯಲ್ಲಿ ಮೊದಲ ಹಾಡನ್ನು ಸುಶೀಲರ ಜೊತೆ ಹಾಡಿದ SPB
ಎಸ್.ಪಿ. ಬಾಲಸುಬ್ರಹ್ಮಣ್ಯಂ ಕನ್ನಡ, ತೆಲುಗು,ತಮಿಳಿನಲ್ಲಿ ತಾವು ಹಾಡಿದ ಮೊದಲ ಹಾಡನ್ನು ಪಿ. ಸುಶೀಲ ಜೊತೆಯೇ ಹಾಡಿದ್ದಾರೆ. ತೆಲುಗಿನಲ್ಲಿ ಶ್ರೀಶ್ರೀ ಶ್ರೀ ಮರ್ಯಾದಾರಾಮಣ್ಣ ಚಿತ್ರದ, ‘ಏಮಿ ಈ ವಿಂತ ಮೋಹಮು’, ಕನ್ನಡದಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರದ, ‘ಕನಸಿದೋ ನನಸಿದೋ’ ಮತ್ತು ತಮಿಳಿನಲ್ಲಿ ಶಾಂತಿ ನಿಲಯಮ್ ಚಿತ್ರದ, ‘ಇಯರ್ಕು ಎನ್ನುಮ್ ಇಳಯ ಕನ್ನಿ’ ಎಂಬ ಹಾಡನ್ನು ಎಸ್.ಪಿ.ಬಿ. ಮತ್ತು ಪಿ.ಸುಶೀಲ ಹಾಡಿದ್ದಾರೆ.ಹೀಗಾಗಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ನೆರವಾದ ಸುಶೀಲಮ್ಮ ಬಗ್ಗೆ ಬಾಲುಗೆ ಅಪಾರ ಗೌರವ.
ಸಾಧನೆಯ ಸಾಲಿನೊಟ್ಟಿಗೆ ಪ್ರಶಸ್ತಿಯ ಗರಿ!
ಪಿ.ಸುಶೀಲರ ಸಂಗೀತ ಸಾಧನೆಗೆ ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ, ತಮಿಳುನಾಡು ಸರ್ಕಾರ ಕಲೈಮಾಮಣಿ ಪ್ರಶಸ್ತಿ,ಆಂಧ್ರ ಸರ್ಕಾರ ರಘುಪತಿ ವೆಂಕಯ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ಹಿನ್ನೆಲೆ ಗಾಯನಕ್ಕೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಚಲನಚಿತ್ರ ಪ್ರಶಸ್ತಿ,ಫಿಲ್ಮ್ ಫೇರ್ ಪ್ರಶಸ್ತಿಗಳನ್ನೂ ಸಹ ಸುಶೀಲ ಪಡೆದಿದ್ದಾರೆ. ವಿದೇಶದಲ್ಲಿಯೂ ಅವರ ಸಂಗೀತ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಶಾಸ್ತ್ರೀಯ ಸಂಗೀತ ಮತ್ತು ಸಿನಿಮಾ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಿ. ಸುಶೀಲ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!
Published On - 6:06 pm, Fri, 13 November 20