‘ಮಹಾನ್’ ಚಿತ್ರದಲ್ಲಿ ಅಪರೂಪದ ಕಾಂಬಿನೇಷನ್; ಗಮನ ಸೆಳೆದ ‘ಒಡಹುಟ್ಟಿದವಳೆ’ ಹಾಡು
ವಿಜಯ್ ರಾಘವೇಂದ್ರ ನಟನೆಯ ಹಾಗೂ ಪಿ.ಸಿ. ಶೇಖರ್ ನಿರ್ದೇಶನದ ಬಹುನಿರೀಕ್ಷಿತ ‘ಮಹಾನ್’ ಚಿತ್ರದ ಪ್ರಚಾರ ಕಾರ್ಯಗಳು ಆರಂಭಗೊಂಡಿವೆ. ಚಿತ್ರದಿಂದ ‘ಒಡ ಹುಟ್ಟಿದವಳೆ’ ಹಾಡು ಬಿಡುಗಡೆಗೊಂಡಿದೆ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಚಿತ್ರದ ವಿಶೇಷತೆಯಾಗಿದೆ. ಅಣ್ಣ-ತಂಗಿ ಬಾಂಧವ್ಯದ ಮೂಲಕ ಈ ಹಾಡು ಎಲ್ಲರಿಗೂ ಇಷ್ಟ ಆಗುತ್ತದೆ.

ಮುಖ್ಯಾಂಶಗಳು
- ಮಹಾನ್ ಸಿನಿಮಾ ಪ್ರಚಾರ ಆರಂಭ
- ವಿಜಯ್ ರಾಘವೇಂದ್ರ ಹೊಸ ಚಿತ್ರದ ಅಪ್‌ಡೇಟ್
- ಈ ಚಿತ್ರದಲ್ಲಿ ಅಪರೂಪದ ಕಾಂಬಿನೇಷನ್
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟನೆಯ ಬಹುನಿರೀಕ್ಷಿತ ‘ಮಹಾನ್’ ಚಿತ್ರದ ಪ್ರಚಾರ ಕಾರ್ಯಗಳು ಅಧಿಕೃತವಾಗಿ ಆರಂಭಗೊಂಡಿವೆ. ಪಿ.ಸಿ. ಶೇಖರ್ ನಿರ್ದೇಶನದ ಈ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಭಾರೀ ಕುತೂಹಲ ಹುಟ್ಟುಹಾಕಿದೆ. ರೈತರ ಪರವಾಗಿ ಧ್ವನಿ ಎತ್ತುವ ರೀತಿಯಲ್ಲಿ ಸಿನಿಮಾ ಇರಲಿದೆಯಂತೆ. ಶಿವರಾಜ್‌ಕುಮಾರ್ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ ಅನ್ನೋದು ವಿಶೇಷ.
ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ನಾಯಕನಾಗಿ ನಟಿಸುತ್ತಿದ್ದು, ಅವರ ತಂಗಿ ಪಾತ್ರದಲ್ಲಿ ಕನ್ನಡದವರೇ ಆದ ವರ್ಷಾ ಬೊಳ್ಳಮ್ಮ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ವರ್ಷಾ ಬೊಳ್ಳಮ್ಮ ಅವರು ಕನ್ನಡದವರೇ ಆದರೂ ಈವರೆಗೆ ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲು ಸಾಧ್ಯವಾಗಿರಲಿಲ್ಲ. ಈ ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಒಂದು ಅತ್ಯಂತ ಪ್ರಮುಖ ಹಾಗೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ವಿಜಯ್ ರಾಘವೇಂದ್ರ ಮತ್ತು ಶಿವರಾಜ್‌ಕುಮಾರ್ ಅವರ ಈ ಅಪರೂಪದ ಕಾಂಬಿನೇಷನ್ ತೆರೆಮೇಲೆ ಹೇಗೆ ಮೂಡಿಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಗರಿಗೆದರಿದೆ. ಈ ಚಿತ್ರದಲ್ಲಿ ಶಿವಣ್ಣ ಹಾಗೂ ವಿಜಯ್ ಇಬ್ಬರೂ ಕೋಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪ್ರಚಾರದ ಮೊದಲ ಹಂತವಾಗಿ ‘ಒಡ ಹುಟ್ಟಿದವಳೆ’ ಹಾಡು ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಸೂರೆಗೊಂಡಿದೆ. ಖ್ಯಾತ ಗಾಯಕ ಸಿಡ್ ಶ್ರೀರಾಮ್ ಈ ಸುಂದರ ಹಾಡಿಗೆ ಧ್ವನಿಯಾಗಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಅರ್ಥಪೂರ್ಣ ಸಾಹಿತ್ಯ ಒದಗಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ.
ಇದನ್ನೂ ಓದಿ: ‘ನಗು ನಗುತ’: ಕಿರುಚಿತ್ರದಲ್ಲಿ ಅಭಿನಯಿಸಿದ ಖ್ಯಾತ ನಟ ವಿಜಯ್ ರಾಘವೇಂದ್ರ
ಉತ್ತಮ ತಾಂತ್ರಿಕ ಬಳಗವನ್ನು ಹೊಂದಿರುವ ಈ ಚಿತ್ರಕ್ಕೆ ವೈದಿ ಎಸ್. ಛಾಯಾಗ್ರಹಣ ಚಿತ್ರಕ್ಕೆ ಇದೆ. ಪ್ರಮುಖ ಪಾತ್ರವರ್ಗ, ನಿರ್ದೇಶನ ಮತ್ತು ಸಂಗೀತದ ಮೂಲಕ ಸದ್ದು ಮಾಡುತ್ತಿರುವ ‘ಮಹಾನ್’ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರತಂಡ ಈಗಿನಿಂದಲೇ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




