
ಇತ್ತೀಚೆಗೆ ‘ಮಾದೇವ’ ಸಿನಿಮಾದ (Maadeva Movie) ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ (Vinod Prabhakar) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಜೊತೆ ಸೋನಲ್ ಮಾಂತೆರೋ, ಶ್ರುತಿ ಮುಂತಾದವರು ಅಭಿನಯಿಸಿದ್ದಾರೆ. ‘ರಾಧಾಕೃಷ್ಣ ಪಿಕ್ಚರ್ಸ್’ ಮೂಲಕ ಆರ್. ಕೇಶವ (ದೇವಸಂದ್ರ) ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ರೆಡ್ಡಿ ಬಿ. ಅವರ ನಿರ್ದೇಶನ ಈ ಚಿತ್ರಕ್ಕಿದೆ. ಇತ್ತೀಚೆಗೆ ಪ್ರೀ-ರಿಲೀಸ್ ಇವೆಂಟ್ ಜೊತೆಗೆ ಹಾಡಿನ ಬಿಡುಗಡೆ ಕೂಡ ನಡೆಯಿತು. ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿ ಒಂದಷ್ಟು ಮಾಹಿತಿ ಹಂಚಿಕೊಂಡರು.
ವಿನೋದ್ ಪ್ರಭಾಕರ್ ಅವರಿಗೆ ಈ ಸಿನಿಮಾದ ಮೇಲೆ ವಿಶೇಷ ಭರವಸೆ ಇದೆ. ‘ನನ್ನ ವೃತ್ತಿಜೀವನದಲ್ಲಿ ಇದು ಒಂದು ವಿಭಿನ್ನ ಚಿತ್ರ. ಖಂಡಿತಾ ಬೇರೆ ಹೆಸರು ತಂದುಕೊಡುತ್ತದೆ. ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ಸಿನಿಮಾ ಏನಾದರೂ ಬೇರೆ ಭಾಷೆಗಳಿಗೆ ಹೋದರೆ ಮೊದಲು ಹೋಗೋದು ಮ್ಯೂಸಿಕ್ ಡೈರೆಕ್ಟರ್ ಪ್ರದ್ಯೋತ್ತನ್. ಇಡೀ ಸಿನಿಮಾಗೆ ಅವರು ಜೀವ ಕೊಟ್ಟಿದ್ದಾರೆ. ಮಾಲಾಶ್ರೀ, ಸೋನಲ್, ಶ್ರುತಿ, ಶ್ರೀನಗರ ಕಿಟ್ಟಿ ಸೇರಿದಂತೆ ಎಲ್ಲ ಕಲಾವಿದರ ನಟನೆ ಚೆನ್ನಾಗಿದೆ’ ಎಂದು ಅವರು ಹೇಳಿದರು.
ನಟಿ ಸೋನಲ್ ಮಾಂತರೋ ಅವರು ಈ ಮೊದಲು ‘ರಾಬರ್ಟ್’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಜೊತೆ ನಟಿಸಿದ್ದರು. ಈಗ ಮತ್ತೆ ‘ಮಾದೇವ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಅಲ್ಲದೇ, ಹಿರಿಯ ಕಲಾವಿದರ ಜೊತೆಗೆ ನಟಿಸಿದ್ದು ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ. ಜೂನ್ 6ರಂದು ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಅವರು ಕಾದಿದ್ದಾರೆ.
ಸಿನಿಮಾ ಬಗ್ಗೆ ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿದರು. ‘ಈ ಸಿನಿಮಾ ನೋಡಿದ ಮೇಲೆ ವಿನೋದ್ ಪ್ರಭಾಕರ್ ಮತ್ತು ಶ್ರುತಿ ಅವರು ಮನಸ್ಸಲ್ಲಿ ಉಳಿಯುತ್ತಾರೆ. ಅವರು ಪಾತ್ರ ಭಯ ಹುಟ್ಟಿಸುತ್ತದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಒಳ್ಳೆಯ ಕಲಾವಿದರು ನಮಗೆ ಸಿಕ್ಕರು. ವಿನೋದ್ ಪ್ರಭಾಕರ್ ಅವರು ಮೊದಲ ಶಾಟ್‍ನಲ್ಲೇ ಅತ್ಯುತ್ತಮ ಅಭಿನಯ ನೀಡಿದರು’ ಎಂದರು ನಿರ್ದೇಶಕ ನವೀನ್ ರೆಡ್ಡಿ.
ಇದನ್ನೂ ಓದಿ: ‘ಮಾದೇವ’ ಸಿನಿಮಾದ ಹೊಸ ಹಾಡಿನಲ್ಲಿ ವಿನೋದ್ ಪ್ರಭಾಕರ್, ಸೋನಲ್ ಕೆಮಿಸ್ಟ್ರಿ
ವಿಶೇಷವಾಗಿ ನಟಿ ಶ್ರುತಿ ಅವರು ‘ಮಾದೇವ’ ಸಿನಿಮಾದಲ್ಲಿ ಭಿನ್ನವಾದ ಪಾತ್ರ ಮಾಡಿದ್ದಾರೆ. ‘ನಾನು 130 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೂ ಆ ಸಿನಿಮಾದಲ್ಲಿ ಜಾಸ್ತಿಯೇ ತೃಪ್ತಿ ಸಿಕ್ಕಿದೆ. ಈ ರೀತಿಯ ಪಾತ್ರಗಳಿಗೆ ನನ್ನನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದೇ ಖುಷಿ. ಕಲಾವಿದೆಯಾಗಿ ನಾನು ಗೆದ್ದಿದ್ದೇನೆ ಅಂತ ನನಗೆ ಅನಿಸುವುದೇ ಈ ಕಾರಣಕ್ಕೆ. ಏಕತಾನತೆಯ ಪಾತ್ರಗಳಿದ್ದರೆ ಕಲಿಕೆ ಸಾಧ್ಯ ಆಗುವುದಿಲ್ಲ. ಈ ರೀತಿಯ ಪಾತ್ರ ನೀಡಿದಾಗ ಮೊದಲು ನಿರ್ದೇಶಕರಿಗೆ ಚಾಲೆಂಜ್ ಇರುತ್ತದೆ. ಅವರ ಧೈರ್ಯ ಮೆಚ್ಚಬೇಕು. ಹೀರೋಯಿನ್ ಆಗಿದ್ದಾಗ ಈ ರೀತಿಯ ವಿಭಿನ್ನ ಪಾತ್ರ ಮಾಡುವುದಕ್ಕೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ನಾನು ಆ ಚಾಲೆಂಜ್ ತೆಗೆದುಕೊಂಡೆ’ ಎಂದಿದ್ದಾರೆ ಶ್ರುತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.