Toxic: ಯಶ್​ಗಾಗಿ ಕನ್ನಡಕ್ಕೆ ಬಂದ ಹಾಲಿವುಡ್ ಆಕ್ಷನ್ ನಿರ್ದೇಶಕ ಯಾರು?

|

Updated on: Aug 08, 2024 | 2:23 PM

Toxic: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಇಂದು (ಆಗಸ್ಟ್ 08) ನಡೆದಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಕೆಲ ಅಂತರಾಷ್ಟ್ರೀಯ ತಂತ್ರಜ್ಞರು ಸಹ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಜೆಜೆ ಪೆರ್ರಿ ಪ್ರಮುಖರು. ಅಂದಹಾಗೆ ಯಾರು ಈ ಜೆಜೆ ಪೆರ್ರಿ? ಹಿನ್ನೆಲೆ ಏನು?

Toxic: ಯಶ್​ಗಾಗಿ ಕನ್ನಡಕ್ಕೆ ಬಂದ ಹಾಲಿವುಡ್ ಆಕ್ಷನ್ ನಿರ್ದೇಶಕ ಯಾರು?
Follow us on

ಯಶ್ ನಟನೆಯ ಕೊನೆಯ ಸಿನಿಮಾ ‘ಕೆಜಿಎಫ್ 2’ ಬಿಡುಗಡೆ ಆಗಿ ಎರಡು ವರ್ಷಗಳಾದವು. ‘ಕೆಜಿಎಫ್’ ಹೊರತುಪಡಿಸಿದರೆ ಅವರ ‘ಸಂತು ಸ್ಟ್ರೈಫ್ ಫಾರ್ವರ್ಡ್’ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷಗಳಾಗಿವೆ. ಹಲವು ವರ್ಷಗಳ ಬಳಿಕ ಇದೀಗ ಯಶ್​ರ ಹೊಸ ಸಿನಿಮಾ ‘ಟಾಕ್ಸಿಕ್‘ ಕೊನೆಗೂ ಸೆಟ್ಟೇರಿದೆ. ಇಂದು (ಆಗಸ್ಟ್ 08) ಸಿನಿಮಾದ ಮುಹೂರ್ತ ನಡೆದಿದ್ದು, ಇಷ್ಟು ವರ್ಷ ಕಾದಿದ್ದಕ್ಕೂ ಭರ್ಜರಿ ತಂಡವನ್ನೇ ಯಶ್ ಕಟ್ಟಿಕೊಂಡಿದ್ದಾರೆ. ವಿಶ್ವದ ಅತ್ಯುತ್ತಮ ತಂತ್ರಜ್ಞರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅದರಲ್ಲಿ ಖ್ಯಾತ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಸಹ ಒಬ್ಬರು. ಅಂದಹಾಗೆ ಈ ಜೆಜೆ ಪೆರ್ರಿ ಯಾರು? ಹಾಲಿವುಡ್​ನ ಬೇಡಿಕೆಯ ಫೈಟ್ ಕೊರಿಯೋಗ್ರಾಫರ್ ಆಗಿದ್ದು ಹೇಗೆ? ಇಲ್ಲಿದೆ ಮಾಹಿತಿ.

ಜೆಜೆ ಪೆರ್ರಿ ಹಾಲಿವುಡ್​ನ ಪ್ರಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಅಥವಾ ಸ್ಟಂಟ್ ಕೊಆರ್ಡಿನೇಟರ್. ‘ದಿ ರನ್​ಡೌನ್’, ‘ಜಾನ್ ವಿಕ್’, ‘ಬ್ಯಾಟ್​ಮ್ಯಾನ್’, ‘ಮಾರ್ಷಲ್ ಕೊಂಬ್ಯಾಟ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಆಕ್ಷನ್ ಸಿನಿಮಾಗಳಲ್ಲಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. ಕೇವಲ ಎಂಟರ ವಯಸ್ಸಿನಲ್ಲಿ ಜೆಜೆ ಪೆರ್ರಿ ಮಾರ್ಷಲ್ ಆರ್ಟ್ ಕಲಿಯಲು ಆರಂಭಿಸಿದರು. ಬಡ ಕುಟುಂಬದ ಜೆಜೆ ಪೆರ್ರಿ, ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದರು. ಅದಕ್ಕೆ ಬದಲಾಗಿ ಹಣ ಪಡೆಯದೆ, ಮಾರ್ಷಲ್ ಆರ್ಟ್ಸ್ ವಿದ್ಯೆ ಕಲಿತರು. ಅದೇ ಅವರ ಕೈ ಹಿಡಿದಿದ್ದು.

ಇದನ್ನೂ ಓದಿ:ಯಶ್ ಸಿನಿಮಾ ನಿರ್ದೇಶನ ಮಾಡ್ತಿರೋ ಗೀತು ಮೋಹನ್​ದಾಸ್ ಸ್ಪೆಷಾಲಿಟಿ ಏನು?

ಕೆಲ ಸಮಯ ಅಮೆರಿಕದ ಸೇನೆಯಲ್ಲಿ ಕೆಲಸ ಮಾಡಿದ ಜೆಜೆ ಪೆರ್ರಿ, ಸೇನೆಯಿಂದ ನಿವೃತ್ತರಾದ ಬಳಿಕ ಸಿನಿಮಾ ರಂಗಕ್ಕೆ ಸ್ಟಂಟ್ ಡಬಲ್ ಆಗಿ ಎಂಟ್ರಿ ನೀಡಿದರು. ಖ್ಯಾತ ಹಾಲಿವುಡ್ ನಟರುಗಳಿಗೆ ಸ್ಟಂಟ್ ಡಬಲ್ ಆಗಿ ಅವರು ಕೆಲಸ ಮಾಡಿದ್ದಾರೆ. 80ರ ದಶಕದ ಹಲವಾರು ಹಾಲಿವುಡ್​ ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ, ಸ್ಟಂಟ್ ಮ್ಯಾನ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. ಅವರ ಕಟ್ಟು ಮಸ್ತು ದೇಹ, ಸ್ಟಂಟ್ ಮಾಡುವ ಪ್ರತಿಭೆಯಿಂದಾಗಿ ಬೇಗನೆ ಸ್ಟಂಟ್ ಕೋಆರ್ಡಿನೇಟರ್ ಸಹ ಆದರು ಜೆಜೆ ಪೆರ್ರಿ.

2003 ರಲ್ಲಿ ಬಿಡುಗಡೆ ಆದ ‘ದಿ ರನ್​ಡೌನ್’ ಸಿನಿಮಾದಲ್ಲಿ ಅವರು ನಿರ್ದೇಶಿಸಿದ ಆಕ್ಷನ್ ಸೀಕ್ವೆನ್ಸ್ ಇಂದಿಗೂ ಅತ್ಯುತ್ತಮ ಎನ್ನಲಾಗುತ್ತದೆ. 2004 ರಲ್ಲಿ ‘ದಿ ರನ್​ಡೌನ್​’ಗೆ ಸ್ಟಂಟ್​ ಆಫ್​ ದಿ ಇಯರ್ ಪ್ರಶಸ್ತಿಯೂ ಬಂತು. ‘ದಿ ರನ್​ಡೌನ್’ ಸಿನಿಮಾದ ಬಳಿಕ ಜೆಜೆ ಪೆರ್ರಿಗೆ ಹಲವು ಅವಕಾಶಗಳು ಸಿಗುತ್ತಲೇ ಹೋದವು. ‘ಎಕ್ಸ್​ ಮೆನ್’, ‘ಬ್ಲಡ್ ಆಂಡ್ ಬೋನ್’, ಆಸ್ಕರ್ ವಿಜೇತ ‘ಅರ್ಗೊ’, ‘ಜಾನ್ ವಿಕ್’, ‘ಸ್ಪೈ’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ತ್ರಿಬಲ್ ಎಕ್ಸ್’, ‘ಐರನ್ ಮ್ಯಾನ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ಜೆಜೆ ಪೆರ್ರಿ ಕೆಲಸ ಮಾಡಿದರು.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಹೇಗಿತ್ತು? ಇಲ್ಲಿದೆ ವಿಡಿಯೋ

ಫೈಟ್ ಕೊಆರ್ಡಿನೇಟರ್, ಆಕ್ಷನ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ಹಲವು ಸಿನಿಮಾಗಳಲ್ಲಿ ನಟನೆಯನ್ನೂ ಸಹ ಜೆಜೆ ಪೆರ್ರಿ ಮಾಡಿದ್ದಾರೆ. ಜೆಜೆ ಪೆರ್ರಿ ನಟಿಸಿರುವುದೆಲ್ಲ ಬಹುತೇಕ ಆಕ್ಷನ್ ಸಿನಿಮಾಗಳಲ್ಲಿಯೇ. 2023 ರಲ್ಲಿ ‘ದಿ ಡೇ ಜಾಬ್’ ಹೆಸರಿನ ಆಕ್ಷನ್ ಸಿನಿಮಾ ನಿರ್ದೇಶನವನ್ನೂ ಸಹ ಜೆಜೆ ಪೆರ್ರಿ ಮಾಡಿದರು. ಆ ಬಳಿಕ ‘ದಿ ಕಿಲ್ಲರ್ಸ್ ಗೇಮ್’ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಣೆ ಸಹ ಮಾಡಿದರು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ.

ಜೆಜೆ ಪೆರ್ರಿಯ ಪ್ರತಿಭೆಯ ಬಗ್ಗೆ ಗೊತ್ತಿದ್ದ ಯಶ್, ತಮ್ಮ ಮುಂದಿನ ಸಿನಿಮಾಕ್ಕಾಗಿ ಜೆಜೆ ಪೆರ್ರಿಯನ್ನು ಸಂಪರ್ಕ ಮಾಡಿದ್ದರು. ಜೆಜೆ ಪೆರ್ರಿ ಹಾಗೂ ಯಶ್ ಮೊದಲು ಭೇಟಿಯಾಗಿದ್ದು 2022 ರಲ್ಲಿ. ಯಶ್, ಅಮೆರಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಜೆಜೆ ಪೆರ್ರಿಯವರ ಶೂಟಿಂಗ್ ಯಾರ್ಡ್​ಗೆ ಹೋಗಿ ಅಲ್ಲಿ ಗನ್ ಶೂಟಿಂಗ್​ ಮಾಡಿದ್ದರು. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಾದ ಬಳಿಕ 2023 ರ ಸೆಪ್ಟೆಂಬರ್ ತಿಂಗಳಲ್ಲಿ ಲಂಡನ್​ನಲ್ಲಿ ಭೇಟಿಯಾಗಿದ್ದರು. ಆಗಲೇ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಜೆಜೆ ಪೆರ್ರಿ ಕೆಲಸ ಮಾಡುವ ಸುದ್ದಿ ಹರಿದಾಡುತ್ತಿತ್ತು. ಈಗ ಸುದ್ದಿ ಬಹುತೇಕ ಖಾತ್ರಿಯಾಗಿದ್ದು, ‘ಟಾಕ್ಸಿಕ್’ ಸಿನಿಮಾದ ಎಲ್ಲ ಆಕ್ಷನ್ ದೃಶ್ಯಗಳನ್ನು ಜೆಜೆ ಪೆರ್ರಿ ಅವರೇ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ