
ದರ್ಶನ್ ನಟನೆಯ ‘ಡೆವಿಲ್’ ಸಿನಿಮದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಆರಂಭವಾಗಿದೆ. ಸಿನಿಮಾ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಬೇಕಿದೆ. ‘ಡೆವಿಲ್’ ಬಳಿಕ ದರ್ಶನ್ ಎಂಥಹಾ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ದರ್ಶನ್, ಮತ್ತೆ ಜನರ ಆದರ, ಗೌರವ ಮತ್ತೆ ಪಡೆಯಲು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ರೀತಿಯ ಸಿನಿಮಾ ಮಾಡಬೇಕು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ನಟಿಸಿದ್ದ ಆದರೆ ಅರ್ಧಕ್ಕೆ ನಿಂತು ಹೋದ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾದ ಚರ್ಚೆಯೂ ಚಾಲ್ತಿಯಲ್ಲಿದೆ. ಇದೀಗ ಆ ಸಿನಿಮಾದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆ ಸಿನಿಮಾ ನಿಂತಿದ್ದೇಕೆ ಎಂದು ಉತ್ತರಿಸಿದ್ದಾರೆ.
ರಾಕ್ಲೈನ್ ಪ್ರೊಡಕ್ಷನ್ನಲ್ಲಿ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಘೋಷಣೆಯಾಗಿ ಚಿತ್ರೀಕರಣವೂ ಚಾಲ್ತಿಯಾಗಿತ್ತು. ಆದರೆ ಕೆಲವೇ ದಿನಗಳ ಚಿತ್ರೀಕರಣದ ಬಳಿಕ ಆ ಸಿನಿಮಾ ನಿಂತು ಹೋಯ್ತು. ಇದೀಗ ರಾಜೇಂದ್ರ ಸಿಂಗ್ ಬಾಬು ಅವರು ಆ ಸಿನಿಮಾ ನಿಂತಿದ್ದೇಕೆ ಎಂದು ಉತ್ತರಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಬಹಳ ಇಷ್ಟಪಟ್ಟು ಕಷ್ಟಪಟ್ಟು ಆ ಸಿನಿಮಾ ಮಾಡಲು ಮುಂದಾಗಿದ್ದೆವು. ಸುಮಾರು ಮೂರು ವರ್ಷಗಳ ಕಾಲ ನಾವು ಕತೆಯ ಮೇಲೆ ಕೆಲಸ ಮಾಡಿದ್ದೆವು. ಬರೋಬ್ಬರಿ ಹನ್ನೆರಡು ವರ್ಷನ್ಗಳನ್ನು ಬರೆದಿದ್ದೆವು. ದರ್ಶನ್ ಸಹ ಬಹಳ ಆಸಕ್ತಿವಹಿಸಿ, ನಾವು ಹೇಳಿದಂತೆಲ್ಲ ರೆಡಿಯಾಗಿ ಬರುತ್ತಿದ್ದರು. ರಾಕ್ಲೈನ್ ವೆಂಕಟೇಶ್ಗೆ ಸಹ ಸಿನಿಮಾದ ಬಗ್ಗೆ ಬಹಳ ಹುಮ್ಮಸ್ಸಿತ್ತು’ ಎಂದಿದ್ದಾರೆ.
ಇದನ್ನೂ ಓದಿ:ಫಾರ್ಮ್ ಹೌಸ್ನಲ್ಲಿ ಪಕ್ಷಿಗಳ ಜೊತೆ ವಿಜಯಲಕ್ಷ್ಮಿ ದರ್ಶನ್ ಖುಷಿಯ ಕ್ಷಣ
‘ಸಿನಿಮಾದ ಮೂಹೂರ್ತ ನಡೆದು ಕೇರಳದಲ್ಲಿ ಸುಮಾರು ಎಂಟೊಂಬತ್ತು ದಿನ ಚಿತ್ರೀಕರಣ ಸಹ ಮಾಡಿದೆವು ಆದರೆ ಅದೇ ಸಮಯಕ್ಕೆ ಕೊರೊನಾ ವಕ್ಕರಿಸಿಕೊಂಡಿತು. ಸಿನಿಮಾದ ಹಾಡುಗಳು ಕಂಪೋಸ್ ಆಗಿದ್ದವು. ಸಿನಿಮಾದ ಕಾಸ್ಟ್ಯೂಮ್ಗಳು ಪ್ರಾಪರ್ಟಿಗಳು ಎಲ್ಲವೂ ತಯಾರಾಗಿದ್ದವು. ಆದರೆ ಕೋವಿಡ್ ಕಾರಣದಿಂದಾಗಿ ಎಲ್ಲವನ್ನೂ ನಿಲ್ಲಿಸಬೇಕಾಯ್ತು. ಕೋವಿಡ್ ಮುಗಿದ ಬಳಿಕ ಶುರು ಮಾಡೋಣ ಎಂದುಕೊಂಡೆವು. ಕೋವಿಡ್ ಮುಗಿಯುವ ವೇಳೆಗೆ ಜನರ ಮನಸ್ಥಿತಿ ಬದಲಾಗಿತ್ತು. ಯಾರೂ ಚಿತ್ರಮಂದಿರಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಇಂಥಹಾ ಸಮಯದಲ್ಲಿ ನೂರು ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡುವುದು ಸವಾಲು ಎನಿಸಿತು’ ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.
ಇದೇ ವಿಷಯವಾಗಿ ಹಿಂದೊಮ್ಮೆ ಮಾತನಾಡಿದ್ದ ನಟ ದರ್ಶನ್, ‘ಇಂಥಹಾ ಸಮಯದಲ್ಲಿ ಆ ಸಬ್ಜೆಕ್ಟ್ ಅನ್ನು ಮುಟ್ಟುವುದು ಬೇಡ ಎನಿಸಿದ ಕಾರಣ ಸಿನಿಮಾ ನಿಂತಿದೆ. ಮುಂದೆ ಯಾವಾಗಲಾದರೂ ಸಮಯ ಸರಿಯಾಗಿದೆ ಎಂದು ಅನಿಸಿದಾಗ ಮತ್ತೆ ಸಿನಿಮಾ ಪ್ರಾರಂಭ ಆಗುತ್ತದೆ’ ಎಂದಿದ್ದರು. ಕೋವಿಡ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಯ್ತು, ಮಾಸ್ ಸಿನಿಮಾಗಳೇ ಹೆಚ್ಚು ಗೆಲ್ಲಲು ಆರಂಭಿಸಿದ ಕಾರಣ ಐತಿಹಾಸಿಕ ಸಿನಿಮಾವನ್ನು ನೆನೆಗುದಿಗೆ ಹಾಕಿದಂತಿದೆ.
ಅಸಲಿಗೆ ಆ ಸಿನಿಮಾ ಸೆಟ್ಟೇರಬೇಕಾದರೆ ಸಹ ಕೆಲವು ಗೊಂದಲಗಳು, ಚರ್ಚೆಗಳು ಎದ್ದಿದ್ದವು. ಮದಕರಿ ನಾಯಕ ಸಿನಿಮಾನಲ್ಲಿ ಸುದೀಪ್ ನಾಯಕನಾಗಿ ನಟಿಸಬೇಕು ಎಂದು ಕೆಲವು ಸಮುದಾಯದ ಮುಖಂಡರು, ಸದಸ್ಯರು ಒತ್ತಾಯಿಸಿದ್ದರು. ಆಗ ಸುದೀಪ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಐತಿಹಾಸಿಕ ಮಹಾಪುರುಷನ ಬಗ್ಗೆ ಸಿನಿಮಾ ಆಗುವುದು ಮುಖ್ಯ ಇಂಥಹವರೇ ನಟಿಸಬೇಕು ಎಂದೇನೂ ಇಲ್ಲ’ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ