ಪುನೀತ್ ರಾಜ್ಕುಮಾರ್ ಕಾಲವಾದ ಬಳಿಕ ಯುವ ರಾಜ್ಕುಮಾರ್ ಅವರು ಅಪ್ಪು ಸ್ಥಾನ ತುಂಬಲಿ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ನಿಜಕ್ಕೂ ಯುವ, ಅಪ್ಪು ಸ್ಥಾನ ತುಂಬಲಿದ್ದಾರೆಯೇ ಎಂಬುದನ್ನು ಕಾಳವೇ ಉತ್ತರಿಸಲಿದೆ. ಆದರೆ ಯುವ ರಾಜ್ಕುಮಾರ್, ಆ ಪ್ರಯತ್ನವಂತೂ ಮಾಡುತ್ತಿದ್ದಾರೆ. ಆದರೆ ಅವರು ಎಷ್ಟರ ಮಟ್ಟಿಗೆ ಯಶಸ್ಸುಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಯುವ ರಾಜ್ಕುಮಾರ್ ಮೊದಲ ಸಿನಿಮಾ ‘ಯುವ’ ಅನ್ನು ಹೊಂಬಾಳೆ ನಿರ್ಮಿಸಿದ್ದು, ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಇದೀಗ ಯುವ ರಾಜ್ಕುಮಾರ್ ಎರಡನೇ ಸಿನಿಮಾ ಸೆಟ್ಟೇರಿದ್ದು, ಎರಡನೇ ಸಿನಿಮಾದ ಟೈಟಲ್ ಅನ್ನು ಸಹ ಪುನೀತ್ ರ ಸಿನಿಮಾದ ಹಾಡಿನೊಂದಿಗೆ ಎರವಲು ಪಡೆದಂತಿದೆ.
ಯುವ ರಾಜ್ಕುಮಾರ್ ನಟನೆಯ ಎರಡನೇ ಸಿನಿಮಾದ ಹೆಸರು ‘ಎಕ್ಕ’ ಎಂದು ಇರಿಸಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಸಿನಿಮಾದ ಟೈಟಲ್ ಮತ್ತು ಹೊಸ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ನಲ್ಲಿ ರಕ್ತದಲ್ಲಿ ಅದ್ದಿ ತೆಗೆದಂತಿರುವ ಯುವ ಕೈಯಲ್ಲಿ ರಕ್ತ ಮೆತ್ತಿದ ಆಯುಧವೊಂದನ್ನು ಹಿಡಿದುಕೊಂಡು, ಯಾರನ್ನೋ ಕೊಲ್ಲಲು ಮುಂದಾವರಂತೆ ನೋಡುತ್ತಿರುವ ಚಿತ್ರವಿದೆ. ಈ ರಕ್ತ-ಸಿಕ್ತ ಫೈಟ್, ಯಾವುದೋ ಮಾಂಸದ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವ ಹಿನ್ನೆಲೆಯಲ್ಲಿ ಚರ್ಮ ಸುಲಿದ ಮಾಂಸದ ತುಂಡುಗಳು ನೇತಾಡುತ್ತಿವೆ. ಆ ಮಾಂಸವನ್ನು ನೇತು ಹಾಕಲು ಬಳಸುವ ವಸ್ತುವನ್ನೇ ಶತ್ರುಗಳನ್ನು ಕೊಲ್ಲಲು ಆಯುಧವನ್ನಾಗಿ ಹಿಡಿದಿದ್ದಾರೆ ಯುವ.
ಇದನ್ನೂ ಓದಿ:ಒಟಿಟಿಗೆ ಬಂತು ಯುವ ರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾ; ಆದರೆ..
ಇನ್ನೊಂದು ಪೋಸ್ಟರ್ನಲ್ಲಿ ಯುವ ರಾಜ್ಕುಮಾರ್ ಕೈಗೆ ಪೊಲೀಸರು ಕೋಳ ಹಾಕಿದ್ದಾರೆ. ಯುವ ರಾಜ್ಕುಮಾರ್ ಬಟ್ಟೆಯೆಲ್ಲ ರಕ್ತಮಯವಾಗಿದೆ. ರಸ್ತೆಯ ಮೇಲೆ ಮಲಗಿರುವ ಯುವ ಕಡೆ ಪೊಲೀಸರು ಕೆಲ ಬಂದೂಕುಗಳನ್ನು ಗುರಿ ಮಾಡಿದ್ದಾರೆ. ಒಟ್ಟಿನಲ್ಲಿ ಎರಡೂ ಪೋಸ್ಟರ್ಗಳು ಸೂಚಿಸುತ್ತಿರುವುದು ಒಂದನ್ನೇ, ಈ ಸಿನಿಮಾ ಬಲು ರಕ್ತ-ಸಿಕ್ತ ಕತೆ ಒಳಗೊಂಡಿರಲಿದೆ ಎಂಬುದನ್ನು.
ಪುನೀತ್ ರಾಜ್ಕುಮಾರ್ ನಟನೆಯ ‘ಜಾಕಿ’ ಸಿನಿಮಾದಲ್ಲಿ ‘ಎಕ್ಕ ರಾಜ ರಾಣಿ…’ ಹಾಡು ಬಹಳ ಜನಪ್ರಿಯಗೊಂಡಿತ್ತು. ಆ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಇಸ್ಪೀಟು ಆಡುವುದರಲ್ಲಿ ನಿಸ್ಸೀಮ. ಈಗ ಅದೇ ಹಾಡಿನ ‘ಎಕ್ಕ’ ಪದವನ್ನು ಯುವ ರಾಜ್ಕುಮಾರ್ ಸಿನಿಮಾಕ್ಕೆ ಇಡಲಾಗಿದೆ. ಇಸ್ಪೀಟು ಆಟ ಪರಿಚಯ ಇರುವವರಿಗೆ ಎಕ್ಕ ಹೆಸರು ಚೆನ್ನಾಗಿ ಪರಿಚಿತವಾಗಿರುತ್ತದೆ.
ಯುವ ರಾಜ್ಕುಮಾರ್ ನಟನೆಯ ಎರಡನೇ ಸಿನಿಮಾ ಇದಾಗಿದ್ದು, ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಜಯಣ್ಣ ಫಿಲಮ್ಸ್. ಸಿನಿಮಾದ ಇತರೆ ಪಾತ್ರವರ್ಗ ಇನ್ನಷ್ಟೆ ಅಂತಿಮಗೊಳ್ಳಬೇಕಿದೆ. ಸಿನಿಮಾ 2025ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ