Sandeshkhali: ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ ಆಧರಿಸಿ ಸಿದ್ಧವಾಗಲಿದೆ ಸಿನಿಮಾ

|

Updated on: Mar 10, 2024 | 4:09 PM

ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪಶ್ಚಿಮ ಬಂಗಾಳದ ಹಲವು ಮಹಿಳೆಯರು ಸಿಡಿದೆದ್ದಿದ್ದಾರೆ. ಸಂದೇಶ್​ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್​ನ ಮುಖಂಡ ಶಹಜಹಾನ್​ ಶೇಖ್​ ನಡೆಸಿದ ಅಕ್ರಮಗಳನ್ನು ಬಯಲಿಗೆ ಎಳೆಯಲಾಗುತ್ತಿದೆ. ಈ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಸಿದ್ಧವಾಗಲಿದೆ. ಈ ಸಿನಿಮಾದಲ್ಲಿ ಹಲವು ಕರಾಳ ಸತ್ಯಗಳು ಬಹಿರಂಗ ಆಗಲಿವೆ.

Sandeshkhali: ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ ಆಧರಿಸಿ ಸಿದ್ಧವಾಗಲಿದೆ ಸಿನಿಮಾ
ಸಂದೇಶ್​ಖಾಲಿ ಸಿನಿಮಾ ಪೋಸ್ಟರ್​, ಶಹಜಹಾನ್​ ಶೇಖ್​
Follow us on

ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣ (Sandeshkhali incident) ಸಖತ್​ ಸದ್ದು ಮಾಡಿದೆ. ಈ ಘಟನೆಯನ್ನು ಅನೇಕರು ಖಂಡಿಸಿದ್ದಾರೆ. ಈಗ ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣವನ್ನು ಆಧರಿಸಿ ಸಿನಿಮಾ ಮೂಡಿಬರಲಿದೆ. ಮಹಿಳಾ ದಿನದ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಆಗಿದೆ. ಈ ಚಿತ್ರಕ್ಕೆ ಸಂದೇಶ್​ಖಾಲಿ’ (Sandeshkhali) ಎಂದು ಶೀರ್ಷಿಕೆ ಇಡಲಾಗಿದೆ. ಆಗಸ್ಟ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಮುಂಬರುವ ಪಶ್ವಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಗೂ ಮೊದಲು ‘ಸಂದೇಶ್​ಖಾಲಿ’ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ‘ಭಯ, ದೌರ್ಜನ್ಯ ಹಾಗೂ ತುಳಿತದ ವಿರುದ್ಧ ನಡೆದ ಯುದ್ಧದ ನೈಜ ಕಥೆ’ ಎಂಬ ಟ್ಯಾಗ್​ಲೈನ್​ ಈ ಸಿನಿಮಾದ ಪೋಸ್ಟರ್​ನಲ್ಲಿದೆ.

‘ಪರಿನ್​ ಮಲ್ಟಿಮೀಡಿಯಾ’ ಬ್ಯಾನರ್​ ಮೂಲಕ ‘ಸಂದೇಶ್​ಖಾಲಿ’ ಸಿನಿಮಾ ನಿರ್ಮಾಣ ಆಗಲಿದೆ. ಸುಮೀತ್​ ಚೌಧರಿ ಮತ್ತು ಕೇವಲ್​ ಸೇಟ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಸೌರಭ್​ ತಿವಾರಿ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಮಿತಾಭ್​ ಸಿಂಗ್​ ಹಾಗೂ ಇಶಾನ್​ ಬಾಜ್​ಪಾಯಿ ಅವರು ಚಿತ್ರಕಥೆ ಬರೆಯಲಿದ್ದಾರೆ. ಟೈಟಲ್​ ಪೋಸ್ಟರ್​ ಬಿಡುಗಡೆ ಆಗಿದೆ.

‘ಸಂದೇಶ್​ಖಾಲಿ’ ಸಿನಿಮಾದ ಪಾತ್ರವರ್ಗ ಕೂಡ ಆಯ್ಕೆ ಆಗಿದೆ. ಆದರೆ ಪಾತ್ರದಾರಿಗಳ ಹೆಸರು ಇನ್ನಷ್ಟೇ ಹೊರಬರಬೇಕಿದೆ. 2026ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಈ ಸಿನಿಮಾ ಬಿಡುಗಡೆಯಾದರೆ ಖಂಡಿತವಾಗಿ ಮತದಾರರ ಮೇಲೆ ಪ್ರಭಾವ ಬೀರಲಿದೆ. ಯಾಕೆಂದರೆ, ತೃಣಮೂಲ ಕಾಂಗ್ರೆಸ್​ನ ಮುಂಖಡ ಶಹಜಹಾನ್​ ಶೇಖ್​ ನಡೆಸಿದ ದೌರ್ಜನ್ಯಗಳ ಕುರಿತು ಈ ಸಿನಿಮಾದಲ್ಲಿ ಹೇಳಲಾಗುವುದು.

ಇದನ್ನೂ ಓದಿ: ಸಂದೇಶ್​ಖಾಲಿ ಪ್ರಕರಣ: 55 ದಿನಗಳ ಬಳಿಕ ಅಂತೂ ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧನ

ಏನಿದು ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ?
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್​ ಮುಖಂಡ ಶಹ್​ಜಹಾನ್​ ಶೇಖ್​ ಮತ್ತು ಆತನ ಸಹಚರರ ವಿರುದ್ಧ ಪಶ್ಚಿಮ ಬಂಗಾಳದ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭೂಮಿ ಕಬಳಿಸಿದ್ದು ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಶಹ್​ಜಹಾನ್​ ಶೇಖ್​ ವಿರುದ್ಧ ಇದೆ. ಫೆ.29ರಂದು ಆತನನ್ನು ಬಂಧಿಸಲಾಯಿತು. ಸದ್ಯ ಈ ಪ್ರಕರಣದ ತನಿಖೆಯಲ್ಲಿ ಸಿಬಿಐ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೂಡ ಶಹಜಹಾನ್​ ಶೇಖ್​ ಮೇಲೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.