ನಟಿಗೆ ಕಿರುಕುಳ, ಡ್ರಗ್ಸ್ ಬಳಕೆ, ಪೊಲೀಸರ ದಾಳಿ ವೇಳೆ ಪರಾರಿಯಾದ ಜನಪ್ರಿಯ ನಟ

Shine Tom Chacko: ಮಲಯಾಳಂ ಚಿತ್ರರಂಗದ ಪ್ರತಿಭಾವಂತ ಮತ್ತು ಬೇಡಿಕೆಯ ನಟ ಶೈನ್ ಟಾಮ್ ಚಾಕೊ ಅವರನ್ನು ವಿವಾದಗಳು ಸುತ್ತುವರೆದಿವೆ. ಹೋಟೆಲ್ ಒಂದರಲ್ಲಿ ತಂಗಿದ್ದ ಟಾಮ್ ಚಾಕೊ ಪೊಲೀಸ್ ದಾಳಿ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಚಾಕೋ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಟಿಗೆ ಕಿರುಕುಳ, ಡ್ರಗ್ಸ್ ಬಳಕೆ, ಪೊಲೀಸರ ದಾಳಿ ವೇಳೆ ಪರಾರಿಯಾದ ಜನಪ್ರಿಯ ನಟ
Shine Tom Chako

Updated on: Apr 17, 2025 | 3:17 PM

ಶೈನ್ ಟಾಮ್ ಚಾಕೊ (Shine Tom Chako) ಮಲಯಾಳಂ ಚಿತ್ರರಂಗದ (Malayalam Movies) ಪ್ರತಿಭಾವಂತ ನಟ. ಹಲವು ನೆನಪುಳಿಯುವ ಪಾತ್ರಗಳಲ್ಲಿ ಟಾಮ್ ಚಾಕೊ ನಟಿಸಿದ್ದಾರೆ. ಇತ್ತೀಚೆಗೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿಯೂ ಸಖತ್ ಸದ್ದು ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬಹುತೇಕ ವಿಲನ್ ಪಾತ್ರಗಳಲ್ಲೇ ನಟಿಸುತ್ತಾರೆ ಶೈನ್ ಟಾಮ್ ಚಾಕೊ. ಸಿನಿಮಾಗಳಲ್ಲಿನ ಅವರ ಪಾತ್ರದ ರೀತಿಯೇ ನಿಜ ಜೀವನದಲ್ಲಿಯೂ ವಿಲನ್ ರೀತಿ ನಡೆದುಕೊಂಡು ಇದೀಗ ಸುದ್ದಿಯಾಗಿದ್ದಾರೆ ನಟ. ಹೋಟೆಲ್ ಒಂದರ ಮೇಲೆ ಪೊಲೀಸರು ದಾಳಿ ಮಾಡಿದಾಗ ಟಾಮ್ ಚಾಕೋ ಅಲ್ಲಿಂದ ಓಡಿ ಪರಾರಿ ಆಗಿದ್ದಾರೆ. ಈ ದೃಶ್ಯ ಇದೀಗ ಹೋಟೆಲ್​ನ ಸಿಸಿಟಿವಿ ಕ್ಯಾಮೆರಾನಲ್ಲಿ ಸೆರೆಯಾಗಿದೆ.

ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದ ಶೈನ್ ಟಾಮ್ ಚಾಕೊ ಕೊಚ್ಚಿಯ ಹೊಟೆಲ್ ಒಂದರಲ್ಲಿ ತಂಗಿದ್ದರು. ಚಾಕೊ, ಹೋಟೆಲ್​ನಲ್ಲಿ ಡ್ರಗ್ ಬಳಕೆ ಮಾಡುತ್ತಿರುವ ಬಗ್ಗೆ ಸುಳಿವು ಪಡೆದ ಪೊಲೀಸರು ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಟಾಮ್ ಚಾಕೊ ಉಳಿದುಕೊಂಡಿದ್ದ ರೂಂ ಸಂಖ್ಯೆ 314ರ ಬಾಗಿಲು ಬಡಿದಿದ್ದಾರೆ. ಬಾಗಿಲು ಬಡಿದಿರುವುದು ಪೊಲೀಸರೆ ಎಂದು ತಿಳಿದ ಟಾಮ್ ಚಾಕೋ, ತಾನು ತಂಗಿದ್ದ ರೂಮಿನ ಕಿಟಕಿಯಿಂದ ಹೊರಗೆ ಬಂದು ಅಲ್ಲಿಂದ ಎರಡನೇ ಫ್ಲೋರ್​ಗೆ ಹಾರಿ ಅಲ್ಲಿಂದ ಮೆಟ್ಟಿಲು ಹಿಡಿದು ಕೆಳಗೆ ಬಂದು ಅಲ್ಲಿಂದ ಪರಾರಿ ಆಗಿದ್ದಾರೆ. ಟಾಮ್ ಚಾಕೋ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲಾ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಆದರೆ ಟಾಮ್ ಚಾಕೋ ಪರಾರಿಯಾಗಿದ್ದು, ಅವರು ಉಳಿದುಕೊಂಡಿದ್ದ ರೂಂನಲ್ಲಿ ಏನಾದರೂ ಸಿಕ್ಕಿದೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಆದರೆ ಈ ಘಟನೆ ನಡೆಯುವ ಒಂದು ದಿನದ ಮುಂಚೆಯಷ್ಟೆ ಟಾಮ್ ಚಾಕೊ ಜೊತೆ ನಟಿಸುತ್ತಿರುವ ನಟಿಯೊಬ್ಬರು ಟಾಮ್ ಚಾಕೋ ಶೂಟಿಂಗ್ ಸೆಟ್​ನಲ್ಲಿ ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದು ಆರೋಪಿಸಿ, ಸಿನಿಮಾ ಸಮಿತಿಗೆ ದೂರು ಸಹ ನೀಡಿದ್ದರು. ಅದರ ಬೆನ್ನಲ್ಲೆ ಇದೀಗ ಟಾಮ್ ಚಾಕೋ ಪೊಲೀಸರ ದಾಳಿ ವೇಳೆ ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಟಾಮ್ ಚಾಕೋಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು ಈವರೆಗೆ ಆತನ ಪತ್ತೆಯಾಗಿಲ್ಲ.

ಇದನ್ನೂ ಓದಿ:ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ರೆಡಿ ಆದ ‘ಎಂಪುರಾನ್’

2011 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಟಾಮ್ ಚಾಕೊ ಪ್ರತಿಭಾವಂತ ನಟ. ಮಲಯಾಳಂನ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಮಲಯಾಳಂ ಸೂಪರ್ ಹಿಟ್ ಸಿನಿಮಾಗಳಾದ ‘ತಲ್ಲುಮಾಲ’, ‘ಇಷ್ಕ್’, ‘ಕುರುಪ್’, ‘ಆಪರೇಷನ್ ಜಾವಾ’, ‘ಕುರುತಿ’, ‘ಕನ್ನೂರು ಸ್ಕ್ವಾಡ್’, ‘ಅಡಿಯೋಸ್ ಅಮಿಗೊ’, ‘ಬಜೂಕಾ’ ತಮಿಳಿನಲ್ಲಿ ವಿಜಯ್ ನಟನೆಯ ‘ಬೀಸ್ಟ್’, ನಾನಿ ನಟನೆಯ ‘ದಸರಾ’, ಜೂ ಎನ್​ಟಿಆರ್ ಜೊತೆಗೆ ‘ದೇವರ’, ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’, ‘ರಾಬಿನ್​ಹುಡ್’, ‘ಗುಡ್ ಬ್ಯಾಡ್ ಅಗ್ಲಿ’, ‘ಜಿಗರ್​ತಾಂಡಾ ಡಬಲ್ ಎಕ್ಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ