
‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಮತ್ತು ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ (Shivarajkumar) ಜೊತೆಯಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಶೀರ್ಷಿಕೆ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಲಿದ್ದು, ‘ಜೈಲರ್’ ಎಂದು ಟೈಟಲ್ ಇಡಲಾಗಿದೆ. ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಮೂಲಕ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ‘ಜೈಲರ್’ (Jailer) ಸಿನಿಮಾದ ಟೈಟಲ್ ಪೋಸ್ಟರ್ ಕೌತುಕ ಮೂಡಿಸುವಂತಿದೆ. ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ಒಂದಾಗುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ಮೂಡಿಬರಲಿದೆ. ಈಗ ಟೈಟಲ್ ಪೋಸ್ಟರ್ ಕಂಡು ರಜನಿಕಾಂತ್ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.
ರಜನಿಕಾಂತ್ ಜೊತೆ ಶಿವರಾಜ್ಕುಮಾರ್ ನಟಿಸುವ ಬಗ್ಗೆ ಹಲವು ದಿನಗಳ ಹಿಂದೆಯೇ ಸುದ್ದಿ ಕೇಳಿಬಂದಿತ್ತು. ಅದನ್ನು ಶಿವಣ್ಣ ಕೂಡ ಖಚಿತ ಪಡಿಸಿದ್ದಾಗಿದೆ. ‘ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ. ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಅವರ ಜತೆ ನನಗೆ ವಿಶೇಷ ಬಾಂಧವ್ಯ ಇದೆ. ಸಿನಿಮಾದಲ್ಲಿ ಪಾತ್ರ ಹೇಗೇ ಇರಲಿ, ಈ ಪ್ರಾಜೆಕ್ಟ್ನ ಭಾಗವಾಗಲು ನನಗೆ ಖುಷಿ ಇದೆ. ಬೆಳ್ಳಿ ಪರದೆಮೇಲೆ ರಜನಿಕಾಂತ್ ಮತ್ತು ನನ್ನನ್ನು ಒಟ್ಟಿಗೆ ನೋಡಿ ಫ್ಯಾನ್ಸ್ ಖುಷಿಪಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದರು.
‘ಜೈಲರ್’ ಸಿನಿಮಾ ಸಖತ್ ಮಾಸ್ ಆಗಿ ಮೂಡಿಬರಲಿದೆ ಎಂಬುದಕ್ಕೆ ಈ ಪೋಸ್ಟರ್ ಸುಳಿವು ನೀಡುತ್ತಿದೆ. ರಕ್ತಸಿಕ್ತವಾಗಿರುವ ಮಚ್ಚನ್ನು ನೇತು ಹಾಕಲಾಗಿರುವ ಡೆಡ್ಲಿ ಪೋಸ್ಟರ್ ಇದಾಗಿದ್ದು, ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಈ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ನಾಯಕಿಯಾಗಿ ಯಾರು ನಟಿಸಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Fri, 17 June 22