
ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಅಪಾರ ಸಾಧನೆ ಮಾಡಿದ್ದ ಸಿಂಗೀತಂ ಅವರು, ಕನ್ನಡ ಚಿತ್ರರಂಗದೊಂದಿಗೂ ಅತ್ಯಂತ ನಿಕಟ ಮತ್ತು ಆಪ್ತ ಸಂಬಂಧವನ್ನು ಹೊಂದಿದ್ದರು. ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಅವರು ನೀಡಿದ ದೃಶ್ಯಕಾವ್ಯಗಳು ಹಾಗೂ ಬ್ಲಾಕ್‌ಬಸ್ಟರ್ ಸಿನಿಮಾಗಳು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯಲಿವೆ.
ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಡಾ. ರಾಜ್‌ಕುಮಾರ್ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿತು. 1982ರಲ್ಲಿ ಮೂಡಿಬಂದ ‘ಹಾಲು ಜೇನು’ ಕುಟುಂಬದ ಭಾವನಾತ್ಮಕ ಸಂಬಂಧಗಳನ್ನು ಮನಮುಟ್ಟುವಂತೆ ಬಿಂಬಿಸಿ ‘ಅತ್ಯುತ್ತಮ ಚಿತ್ರ’ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಅದೇ ವರ್ಷ ಬಿಡುಗಡೆಯಾದ ‘ಚಲಿಸುವ ಮೋಡಗಳು’ ಮಧುರ ಸಂಗೀತ ಮತ್ತು ರೊಮ್ಯಾಂಟಿಕ್ ಕಥಾಹಂದರದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕನ್ನಡ ಚಿತ್ರರಂಗದಲ್ಲಿ ಕೇವಲ ಭಾವನಾತ್ಮಕ ಸಿನಿಮಾಗಳನ್ನಷ್ಟೇ ಅಲ್ಲದೆ, ವೈವಿಧ್ಯಮಯ ಶೈಲಿಯ ಚಿತ್ರಗಳನ್ನು ಸಿಂಗೀತಂ ನೀಡಿದರು. 1983ರಲ್ಲಿ ಬಿಡುಗಡೆಯಾದ ‘ಎರಡು ನಕ್ಷತ್ರಗಳು’ ಮತ್ತು 1984ರ ‘ಶ್ರಾವಣ ಬಂತು’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡವು. 1986ರಲ್ಲಿ ತೆರೆಕಂಡ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಪಕ್ಕಾ ಹಾಸ್ಯಮಯ ಕಥಾಹಂದರ ಹೊಂದಿದ್ದು, ಸಿಂಗೀತಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಡಾ. ರಾಜ್‌ಕುಮಾರ್ ಅವರ 200ನೇ ಮೈಲಿಗಲ್ಲಿನ ಚಿತ್ರವಾದ ‘ದೇವತಾ ಮನುಷ್ಯ’ (1988) ಚಿತ್ರವನ್ನೂ ನಿರ್ದೇಶಿಸಿದ ಹೆಗ್ಗಳಿಕೆ ಸಿಂಗೀತಂ ಅವರದ್ದಾಗಿದೆ.
ಇದನ್ನೂ ಓದಿ: 94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ
ಜಗ್ಗೇಶ್ ನಟನೆಯ ‘ಮೇಕಪ್’, ಶಿವರಾಜ್‌ಕುಮಾರ್ ಅಭಿನಯದ ‘ಆನಂದ್’, ರಾಘವೇಂದ್ರ ರಾಜ್‌ಕುಮಾರ್ ನಟನೆಯ ‘ಚಿರಂಜೀವಿ ಸುಧಾಕರ’, ‘ಟುವ್ವಿ ಟುವ್ವಿ ಟುವ್ವಿ’ ಮುಂತಾದ ಸಿನಿಮಾಗಳಿಗೆ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನ ಮಾಡಿದ್ದರು.
ಇಷ್ಟೇ ಅಲ್ಲದೆ, ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ ಯಾವುದೇ ಸಂಭಾಷಣೆಗಳಿಲ್ಲದ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ (1987) ನಿರ್ಮಾಣಗೊಂಡಿದ್ದು ಮತ್ತು ಪ್ರದರ್ಶನಗೊಂಡಿದ್ದು ಬೆಂಗಳೂರಿನಲ್ಲೇ ಎಂಬುದು ವಿಶೇಷ. ಕಮಲ್ ಹಾಸನ್ ಅಭಿನಯದ ಈ ಕ್ರಾಂತಿಕಾರಿ ಪ್ರಯೋಗಕ್ಕೆ ಸಿಂಗೀತಂ ಅವರು ಅತ್ಯುತ್ತಮ ನಿರ್ದೇಶಕ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತಮ್ಮ ವಿಶಿಷ್ಟ ಕಥಾಹಂದರ, ತಾಂತ್ರಿಕ ನೈಪುಣ್ಯ ಮತ್ತು ಪ್ರೇಕ್ಷಕರ ಮನ ಗೆಲ್ಲುವ ಶೈಲಿಯಿಂದ ಕನ್ನಡ ಚಿತ್ರರಂಗದ ಸುವರ್ಣ ಯುಗಕ್ಕೆ ಮೆರುಗು ನೀಡಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ಹೆಸರು ಕನ್ನಡ ಸಿನಿರಸಿಕರ ಮನದಲ್ಲಿ ಎಂದಿಗೂ ಅಮರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.