
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದುನಿಯಾ ವಿಜಯ್ (Duniya Vijay) ಈಗ ಮತ್ತೊಂದು ಭರ್ಜರಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಮತ್ತು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ (Slum Dog) ಚಿತ್ರದಲ್ಲಿ ದುನಿಯಾ ವಿಜಯ್ ಭೀಕರ ವಿಲನ್ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ ಈ ಆ್ಯಕ್ಷನ್ ಡ್ರಾಮಾ ಸಿನಿಮಾದ ಟೀಸರ್, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಸಿನಿಮಾದ ಕಥೆಯ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗ ಆಗಿಲ್ಲ. ಆದರೆ ಸಿಕ್ಕಾಪಟ್ಟೆ ಕೌತುಕ ನಿರ್ಮಾಣ ಆಗಿದೆ. ವಿಜಯ್ ಸೇತುಪತಿ ರೀತಿಯೇ ದುನಿಯಾ ವಿಜಯ್ ಪಾತ್ರ ಕೂಡ ಸಖತ್ ಹೈಲೈಟ್ ಆಗಿದೆ.
‘33 ಟೆಂಪಲ್ ರೋಡ್’ ಎಂಬ ಕುತೂಹಲಕಾರಿ ಟ್ಯಾಗ್‌ಲೈನ್ ಹೊಂದಿರುವ ಈ ಸಿನಿಮಾದ ಟೀಸರ್ ಆರಂಭವಾಗುವುದೇ ವಿಜಯ್ ಸೇತುಪತಿ ಅವರ ಖಡಕ್ ಡೈಲಾಗ್‌ನೊಂದಿಗೆ. ಭಿಕ್ಷುಕರ ಬದುಕು ಮತ್ತು ಅವರನ್ನು ಶೋಷಿಸುವ ದುಷ್ಟರ ವಿರುದ್ಧದ ಎಚ್ಚರಿಕೆಯ ಮಾತುಗಳೊಂದಿಗೆ ಟೀಸರ್ ತೆರೆದುಕೊಳ್ಳುತ್ತದೆ. ಆ್ಯಕ್ಷನ್ ಸೀಕ್ವೆನ್ಸ್‌ಗಳು, ಎಮೋಷನಲ್ ಸನ್ನಿವೇಶಗಳು ಮತ್ತು ಪಾತ್ರಗಳ ಪರಿಚಯದೊಂದಿಗೆ ಒಂದು ಅಪಾಯಕಾರಿ ಜಗತ್ತನ್ನು ಈ ಟೀಸರ್ ತೋರಿಸುತ್ತದೆ.
ಆದರೆ, ಇಡೀ ಟೀಸರ್‌ನಲ್ಲಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿರುವುದು ವಿಜಯ್ ಸೇತುಪತಿ ಅವರ ಪಾತ್ರದ ರಹಸ್ಯ. ಚಿತ್ರದಲ್ಲಿ ಅವರು ಅಂಧ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರಾದರೂ, ಅವರ ಪಾತ್ರದ ಹಿಂದೆ ದೊಡ್ಡದೊಂದು ನಿಗೂಢ ಸತ್ಯ ಅಡಗಿದೆ ಎಂಬುದನ್ನು ಟೀಸರ್ ಸೂಚಿಸುತ್ತದೆ. ಅವರು ನಿಜವಾಗಿಯೂ ದೃಷ್ಟಿಹೀನರೇ ಅಥವಾ ಯಾವುದೋ ದೊಡ್ಡ ಉದ್ದೇಶಕ್ಕಾಗಿ ಈ ರೂಪ ಧರಿಸಿದ್ದಾರಾ ಎಂಬ ಕುತೂಹಲವು ಪ್ರೇಕ್ಷಕರಲ್ಲಿ ಮೂಡಿದೆ.
ಇದನ್ನೂ ಓದಿ: ‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ
ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ನಾಯಕನನ್ನು ವಿಭಿನ್ನವಾಗಿ ಪ್ರೆಸೆಂಟ್ ಮಾಡುವ ನಿರ್ದೇಶಕ ಪುರಿ ಜಗನ್ನಾಥ್, ಈ ಬಾರಿಯೂ ವಿಜಯ್ ಸೇತುಪತಿ ಅವರಿಗೆ ರಗಡ್ ಮೇಕ್ ಓವರ್ ನೀಡಿದ್ದಾರೆ. ಈ ಮಾಸ್ ಕಥೆಗೆ ಅಷ್ಟೇ ಬಲಿಷ್ಠವಾಗಿ ಟಕ್ಕರ್ ನೀಡಲು ದುನಿಯಾ ವಿಜಯ್ ಎದುರಾಗಿದ್ದಾರೆ. ಟೀಸರ್‌ನಲ್ಲಿ ಅವರ ಲುಕ್ ಭೀತಿ ಹುಟ್ಟಿಸುವಂತಿದ್ದು, ಚಿತ್ರದಲ್ಲಿ ಅವರು ಅತ್ಯಂತ ಅಪಾಯಕಾರಿ ವಿಲನ್ ಪಾತ್ರದಲ್ಲಿ ಮಿಂಚಿರುವುದು ಸ್ಪಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.