Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್​ ಹೀರೋ ಸೋನು ಸೂದ್​

ಮೊದಲ ಆಕ್ಸಿಜನ್ ಪ್ಲಾಂಟ್​ ಅನ್ನು ಫ್ರಾನ್ಸ್​ನಿಂದ ಆರ್ಡರ್​ ಮಾಡಲಾಗಿದ್ದು, ಇನ್ನು 10ರಿಂದ 12 ದಿನಗಳ ಒಳಗೆ ಅದು ಭಾರತಕ್ಕೆ ಬರಲಿದೆ ಎಂದು ಹೇಳಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕು ಎಂದು ಸೋನು ಸೂದ್ ಪಣತೊಟ್ಟಿದ್ದಾರೆ​.

Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್​ ಹೀರೋ ಸೋನು ಸೂದ್​
ನಟ ಸೋನು ಸೂದ್

Updated on: May 11, 2021 | 10:15 AM

ನಟ ಸೋನು ಸೂದ್​ ಅವರು ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ. ಕಷ್ಟ ಎಂದು ಹೇಳಿದ ಎಲ್ಲರಿಗೂ ಅವರು ಸಹಾಯ ಮಾಡುತ್ತಿದ್ದಾರೆ. ಸದ್ಯದ ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಯ ಬೆಡ್​ ಸಿಗದೇ ಒದ್ದಾಡುತ್ತಿರುವ, ಆಕ್ಸಿಜನ್​ ಸಿಲಿಂಡರ್​ ಕೊರತೆ ಅನುಭವಿಸುತ್ತಿರುವ ಕೊವಿಡ್​ ಸೋಂಕಿತರಿಗಾಗಿ ಸೋನು ಸೂದ್​ ಹಲವು ಬಗೆಯಲ್ಲಿ ನೆರವು ನೀಡುತ್ತಿದ್ದಾರೆ. ಈಗ ಅವರು ಆಕ್ಸಿಜನ್​ ಕೊಡಿಸುವ ಸಲುವಾಗಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.

ದೆಹಲಿ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್​ ಪ್ಲಾಂಟ್​ಗಳನ್ನು ಸ್ಥಾಪಿಸಲು ಸೋನು ಸೂದ್​ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವರು ಆಕ್ಸಿಜನ್​ ಪ್ಲಾಂಟ್​ಗಳನ್ನು ಫ್ರಾನ್ಸ್​ನಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ.

‘ದೇಶದಲ್ಲಿ ಸಾಕಷ್ಟು ಜನರು ಆಕ್ಸಿಜನ್​ ಕೊರೆತೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಈಗ ನಾವು ಆಕ್ಸಿಜನ್​ ಪ್ಲಾಂಟ್​ ಪಡೆಯಲಿದ್ದೇವೆ. ಅದರಿಂದ ಸಿಲಿಂಡರ್​ಗಳನ್ನು ಸದಾ ಕಾಲ ತುಂಬಿಸಿ ಇಡಲು ಸಹಕಾರಿ ಆಗುತ್ತದೆ. ಕೊವಿಡ್​ನಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ’ ಎಂದು ಸೋನು ಸೂದ್​ ಹೇಳಿದ್ದಾರೆ.

ಮೊದಲ ಆಕ್ಸಿಜನ್ ಪ್ಲಾಂಟ್​ ಅನ್ನು ಫ್ರಾನ್ಸ್​ನಿಂದ ಆರ್ಡರ್​ ಮಾಡಲಾಗಿದ್ದು, ಇನ್ನು 10ರಿಂದ 12 ದಿನಗಳ ಒಳಗೆ ಅದು ಭಾರತಕ್ಕೆ ಬರಲಿದೆ ಎಂದು ಹೇಳಲಾಗಿದೆ. ‘ಸಮಯ ಎಂಬುದೇ ಈಗ ನಮಗೆ ದೊಡ್ಡ ಸವಾಲಾಗಿದೆ. ಆದಷ್ಟು ಬೇಗ ಆಕ್ಸಿಜನ್​ ಪ್ಲಾಂಟ್​ ಬರಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕು’ ಎಂದಿದ್ದಾರೆ ಸೋನು ಸೂದ್​.

ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ತಾಂಡವ ಆಡುತ್ತಿದೆ. ಸೋನು ಸೂದ್​ ಮಾತ್ರವಲ್ಲದೆ, ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್​ ಜೋನಸ್​ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ-ವಿರಾಟ್​ ಕೊಯ್ಲಿ ಕೂಡ 2 ಕೋಟಿ ರೂ. ದೇಣಿಗೆ ನೀಡಿದ್ದೂ ಅಲ್ಲದೇ ಕೈಲಾದಷ್ಟು ಸಹಾಯ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಅರ್ಜುನ್​ ಗೌಡ, ಹರ್ಷಿಕಾ ಪೂಣಚ್ಚ, ಭುವನ್​ ಗೌಡ, ಜಗ್ಗೇಶ್​, ಉಪೇಂದ್ರ, ಶ್ರೀಮುರಳಿ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.

ಇದನ್ನೂ ಓದಿ:

ಕ್ರಿಕೆಟಿಗ ಸುರೇಶ್ ರೈನಾಗೆ 10 ನಿಮಿಷದಲ್ಲಿ ಆಕ್ಸಿಜನ್ ಕೊಡಿಸಿದ ನಟ ಸೋನು ಸೂದ್!

IPL​ ರದ್ದಾದ ಬಳಿಕ ಆಸೀಸ್​ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್​ಗೆ ಮನವಿ; ನಟನ ಉತ್ತರ ಏನು?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us