
ಸನ್ನಿ ಲಿಯೋನಿ (Sunny Leone), ನೀಲಿ ಚಿತ್ರಗಳ ಲೋಕಕ್ಕೆ ವಿದಾಯ ಹೇಳಿ ವರ್ಷಗಳೇ ಆಗಿದೆ. ಅವರು ಈಗ ಚಿತ್ರರಂಗದಲ್ಲಿ ಸೆಟಲ್ ಆಗಿದ್ದಾರೆ ಆದರೂ ಸಹ ಆಗಾಗ್ಗೆ ಅವರ ಇತಿಹಾಸದ ಕಾರಣಕ್ಕೆ ಆಗಾಗ್ಗೆ ಮುಜುಗರಕ್ಕೆ, ನಿಂದನೆಗೆ ಒಳಗಾಗುತ್ತಲೇ ಇರುತ್ತಾರೆ. ಸನ್ನಿ ಲಿಯೋನಿ, ನೀಲಿ ಚಿತ್ರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರೂ, ಈಗಲೂ ಸಹ ಅವರನ್ನು ಗ್ಲಾಮರ್ ಕ್ವೀನ್ ಆಗಿ, ಪಾರ್ಟಿ ಗರ್ಲ್ ಆಗಿಯೇ ನೋಡಲಾಗುತ್ತದೆ. ಇದೇ ಕಾರಣಕ್ಕೆ ಹಲವು ಪಾರ್ಟಿಗಳಿಗೆ ವಿಶೇಷ ಅತಿಥಿಯಾಗಿ, ವಿಶೇಷ ಗ್ಲಾಮರಸ್ ಲೈವ್ ಶೋಗೆ ಆಹ್ವಾನಿಸಲಾಗುತ್ತದೆ. ಇಂಥಹುದೇ ಒಂದು ಶೋ ಇತ್ತೀಚೆಗೆ ರದ್ದಾಗಿದೆ.
ಹೊಸ ವರ್ಷಾಚರಣೆಗೆಂದು ಸನ್ನಿ ಲಿಯೋನಿ ಅವರ ಲೈವ್ ಶೋ ಅನ್ನು ಕೃಷ್ಣನ ಜನ್ಮಭೂಮಿ ಎಂದು ಖ್ಯಾತವಾಗಿರುವ ಮಥುರಾನಲ್ಲಿ ಆಯೋಜನೆ ಮಾಡಲಾಗಿತ್ತು. ಮಥುರಾದ ಐಶಾರಾಮಿ ಖಾಸಗಿ ಹೋಟೆಲ್ ಒಂದು ಹೊಸ ವರ್ಷಾಚರಣೆಗೆಂದು ಡಿಜಿ ಪಾರ್ಟಿ ಆಯೋಜಿಸಿತ್ತು, ಕಾರ್ಯಕ್ರಮದಲ್ಲಿ ಸನ್ನಿ ಲಿಯೋನಿ ವಿಶೇಷ ಅತಿಥಿ ಆಗಿದ್ದರು. ಗ್ಲಾಮರಸ್ ನೃತ್ಯ ಪ್ರದರ್ಶನವನ್ನೂ ಸಹ ಅವರು ಅಲ್ಲಿ ನೀಡಲಿದ್ದರು. ಹೋಟೆಲ್ನವರು ಮುಂಚಿತವಾಗಿಯೇ ಸ್ಥಳೀಯ ಆಡಳಿತ ಮತ್ತು ಪೊಲೀಸರಿಂದ ಅನುಮತಿಯನ್ನು ಸಹ ಪಡೆಯಲಾಗಿತ್ತು. ಆದರೆ ಕೆಲ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮುಖಂಡರ ಆಕ್ಷೇಪಣೆಗೆ ಮೇರೆಗೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ:ಕೊಲ್ಕತ್ತನಲ್ಲಿ ಮಿಂಚು ಹರಿಸಿದ ಸನ್ನಿ ಲಿಯೋನಿ: ವಿಡಿಯೋ ನೋಡಿ
ಸನ್ನಿ ಲಿಯೋನಿ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಹೋಟೆಲ್ನವರು ಘೋಷಣೆ ಆದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳವರು ಪ್ರತಿಭಟನೆ ಆರಂಭಿಸಿದ್ದರು. ಸ್ಥಳೀಯ ಧಾರ್ಮಿಕ ಮುಖಂಡರು, ಮಠದ ಗುರುಗಳು ಸಹ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೋಟೆಲ್ಗೆ ಮುತ್ತಿಗೆ ಹಾಕುವುದಾಗಿಯೂ ಸಹ ಕೆಲ ಧಾರ್ಮಿಕ ಸಂಘಟನೆ ಸದಸ್ಯರು ಎಚ್ಚರಿಕೆ ನೀಡಿದ್ದರು. ಇದೆಲ್ಲದರ ಬೆನ್ನಲ್ಲೆ ಇದೀಗ ಹೋಟೆಲ್ನವರೇ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
‘ಸನ್ನಿ ಲಿಯೋನಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು, ಅವರು ನಮ್ಮ ಹೋಟೆಲ್ ಕಾರ್ಯಕ್ರಮಕ್ಕೆ ಬರುವುದು ವಿಶೇಷವಾಗಿತ್ತು. ಅದಕ್ಕೆ ಬೇಕಾದ ಎಲ್ಲ ಅನುಮತಿಗಳನ್ನೂ ಸಹ ನಾವು ತೆಗೆದುಕೊಂಡಿದ್ದೆವು. ಕಾರ್ಯಕ್ರಮವನ್ನು ನಾವು ಕಾನೂನು ನಿಯಮದ ಅಡಿಯಲ್ಲಿಯೇ ನಡೆಸಲಿದ್ದೆವು ಆದರೆ ಇದೀಗ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ’ ಎಂದಿದೆ ಹೋಟೆಲ್ ಆಡಳಿತ ಮಂಡಳಿ.
ಸನ್ನಿ ಲಿಯೋನಿಗೆ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಅವರ ಕೆಲವು ಕಾರ್ಯಕ್ರಮಗಳು ಪ್ರತಿಭಟನೆ ಇನ್ನಿತರೆ ಕಾರಣಗಳಿಗೆ ರದ್ದಾಗಿದ್ದು ಇದೆ. ಇದೀಗ ಮತ್ತೊಮ್ಮೆ ಸನ್ನಿ ಲಿಯೋನಿಯ ಕಾರ್ಯಕ್ರಮ ಧಾರ್ಮಿಕ ಮುಖಂಡರ ಒತ್ತಾಯದ ಕಾರಣಕ್ಕೆ ರದ್ದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ