
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಎಷ್ಟು ಹುಷಾರಾಗಿದ್ದರೂ ಸಾಲದು. ಅಪ್ಪಿತಪ್ಪಿ ಒಂದು ಮಾತು ಬೇರೆ ಅರ್ಥ ಪಡೆದುಕೊಂಡರೆ ದೊಡ್ಡ ವಿವಾದವೇ ಆಗಿ ಹೋಗುತ್ತದೆ. ಅಂಥದ್ದರಲ್ಲಿ ನೇರಾನೇರವಾಗಿ ಒಂದು ಜಾತಿಯ ಬಗ್ಗೆ ಕೀಳಾಗಿ ಮಾತನಾಡಿದರೆ ಜನರು ಬಿಡುತ್ತಾರಾ? ಖಂಡಿತಾ ಇಲ್ಲ. ಹಿಂದಿ ಕಿರುತೆರೆಯ ಖ್ಯಾತ ನಟಿ ಮುನ್ಮುನ್ ದತ್ತ ಅವರು ಇಂಥ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಇರುವ ಕಾರಣ ಈಗ ಆನ್ಲೈನ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಹಿಂದಿಯ ‘ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ’ ಸೀರಿಯಲ್ ಖ್ಯಾತಿಯ ನಟಿ ಮುನ್ಮುನ್ ದತ್ತ ಕೂಡ ಇತ್ತೀಚೆಗೆ ಒಂದು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹಂಚಿಕೊಂಡರು. ಆ ಸಂದರ್ಭದಲ್ಲಿ ಅವರು ಆಡಿದ ಒಂದು ಮಾತು ತೀವ್ರ ವಿವಾದಕ್ಕೆ ಕಾರಣ ಆಗಿದೆ. ಏನನ್ನೋ ಮಾತನಾಡುವ ಭರದಲ್ಲಿ ಅವರು ಜಾತಿ ನಿಂದನೆ ಮಾಡಿದ್ದಾರೆ.
ಯೂಟ್ಯೂಬ್ ವಿಡಿಯೋದಲ್ಲಿ ತಮ್ಮ ಮೇಕಪ್ ಬಗ್ಗೆ ಮುನ್ಮುನ್ ದತ್ತ ಮಾಹಿತಿ ನೀಡುತ್ತಿದ್ದರು. ‘ಯೂಟ್ಯೂಬ್ನಲ್ಲಿ ಎಲ್ಲರ ಎದುರಿಗೆ ಬರುತ್ತಿದ್ದೇನೆ. ಚೆನ್ನಾಗಿ ಕಾಣಬೇಕು ಅಂತ ಸ್ವಲ್ಪ ಮೇಕಪ್ ಮಾಡಿಕೊಂಡಿದ್ದೇನೆ. ಆ ಜಾತಿಯವರ ರೀತಿ ಕಾಣಲು ನನಗೆ ಇಷ್ಟ ಇಲ್ಲ’ ಎಂದು ಒಂದು ನಿರ್ದಿಷ್ಟ ಜಾತಿಯ ಹೆಸರು ಹೇಳಿದ್ದಾರೆ. ಅದೇ ಈಗ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮುನ್ಮುನ್ ದತ್ತ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೀಗೆ ಬಹಿರಂಗವಾಗಿ ಜಾತಿ ನಿಂದನೆ ಮಾಡಿರುವುದಕ್ಕೆ ಮುನ್ಮುನ್ ದತ್ತ ಅವರನ್ನು ಅರೆಸ್ಟ್ ಮಾಡಬೇಕು ಎಂದು ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. #ArrestMunmunDutta ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಮಾಡಲಾಗುತ್ತಿದೆ. ‘ಈಕೆ ತನ್ನನ್ನು ತಾನು ಪ್ರಾಣಿ ಪ್ರಿಯೆ ಎಂದು ಕರೆದುಕೊಂಡಿದ್ದಾಳೆ. ಆದರೆ ಮನುಷ್ಯರನ್ನು ಪ್ರೀತಿಸುವುದನ್ನು ಮರೆತಿದ್ದಾಳೆ’ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.
ವಿಷಯ ಇಷ್ಟು ಸೀರಿಯಸ್ ಆದ ಬಳಿಕ ಟ್ವಿಟರ್ ಮೂಲಕ ಮುನ್ಮುನ್ ದತ್ತ ಕ್ಷಮೆ ಕೇಳಿದ್ದಾರೆ. ‘ಯಾರಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಸಿರಲಿಲ್ಲ. ನನ್ನ ಭಾಷೆಯ ಮಿತಿಯಿಂದಾಗಿ ಆ ಪದದ ಸರಿಯಾದ ಅರ್ಥ ನನಗೆ ತಿಳಿದಿರಲಿಲ್ಲ. ಎಲ್ಲರ ಜಾತಿ, ಧರ್ಮ, ಜನಾಂಗದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಮುನ್ಮುನ್ ದತ್ತ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಜಾತಿ ನೋಡಿ ಪಾಠ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ?