
ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇಂದು (ಸೆಪ್ಟೆಂಬರ್ 9) ನಿಧನ ಹೊಂದಿದ್ದಾರೆ. ಅನಾರೋಗ್ಯ ಕಾರಣದಿಂದ ಸೆಪ್ಟೆಂಬರ್ 3ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯನ್ನು ಅಕ್ಷಯ್ ಕುಮಾರ್ ನೆರವೇರಿಸಿದ್ದಾರೆ. ಈ ನೋವಿನಲ್ಲೂ ಅವರು ಮತ್ತೊಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು ಈಗ ಸಾಕಷ್ಟು ಸುದ್ದಿಯಾಗುತ್ತಿದೆ.
ನಿರ್ದೇಶಕ ಆನಂದ್ ಎಲ್. ರಾಯ್ ಬಾಲಿವುಡ್ನಲ್ಲಿ ತುಂಬಾನೇ ಫೇಮಸ್. ಅವರು ‘ತನು ವೆಡ್ಸ್ ಮನು’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ತಾಯಿ ಕೂಡ ಇಂದು (ಸೆಪ್ಟೆಂಬರ್ 9) ಮೃತಪಟ್ಟಿದ್ದಾರೆ. ಆನಂದ್ ಹಾಗೂ ಅಕ್ಷಯ್ ಉತ್ತಮ ಗೆಳೆಯರು. ಈ ಕಾರಣಕ್ಕೆ ಆನಂದ್ ತಾಯಿಗೆ ಕೊನೆಯ ನಮನ ಸಲ್ಲಿಸಲು ಅಕ್ಷಯ್ ತೆರಳಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದು, ಅಕ್ಷಯ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಾಹ್ನ ಅಕ್ಷಯ್ ಕುಮಾರ್ ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಸಂಜೆ ವೇಳೆಗೆ ಅವರು ಆನಂದ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ತಮ್ಮ ನೋವಿನ ನಡುವೆಯೂ ಅವರು ಆನಂದ್ ಅವರನ್ನು ಭೇಟಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ತಮ್ಮ ತಾಯಿ ನಿಧನವಾಗಿರುವ ಸುದ್ದಿಯನ್ನು ಅಕ್ಷಯ್ ಕುಮಾರ್ ಅವರೇ ಖಚಿತಪಡಿಸಿದ್ದರು. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಅವರು, ‘ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’ ಎಂದಿದ್ದರು.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ಗೆ ಮಾತೃ ವಿಯೋಗ; ಅಗಲಿದ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದ ನಟ
Published On - 9:52 pm, Wed, 8 September 21