
ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್ ಶುಕ್ಲಾ ಅವರು ಗುರುವಾರ (ಸೆ.2) ಹೃದಯಾಘಾತದಿಂದ ಮೃತರಾಗಿದ್ದಾರೆ. ಬಿಗ್ ಬಾಸ್ ಹಿಂದಿ 13ನೇ ಸೀಸನ್ ವಿನ್ನರ್ ಆಗಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ‘ಬಾಲಿಕಾ ವಧು’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಜನಪ್ರಿಯತೆ ಗಳಿಸಿದ್ದರು. ಬುಧವಾರ ರಾತ್ರಿ ಮಲಗುವಾಗು ಅವರು ಯಾವುದೋ ಔಷಧಿ ಸೇವಿಸಿದ್ದರು. ಆದರೆ ಗುರುವಾರ ಬೆಳಗ್ಗೆಯೊಳಗೆ ಅವರು ನಿಧನರಾಗಿದ್ದಾರೆ ಎಂದು ಮುಂಬೈನ ಕೂಪರ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಸಿದ್ಧಾರ್ಥ್ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.
ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಸಿದ್ಧಾರ್ಥ್ ಶುಕ್ಲಾ ಅಗಲಿದ್ದಾರೆ. ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ಅವರು ನಂತರ ಕಿರುತೆರೆಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಹಲವು ಧಾರಾವಾಹಿಗಳಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ ಬಾಸ್ ಮಾತ್ರವಲ್ಲದೆ, ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದರು. ಬಿಗ್ ಬಾಸ್ 14ರಲ್ಲಿ ಅವರು ಗೆಸ್ಟ್ ಆಗಿ ದೊಡ್ಮನೆ ಪ್ರವೇಶಿಸಿದ್ದರು.
ಸೀರಿಯಲ್ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಮಾತ್ರವಲ್ಲದೆ, ಹಲವು ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಅತಿಥಿ ಪಾತ್ರ ಮಾಡಿದ್ದರು. ಬಾಲಿವುಡ್ನ ಕೆಲವು ಸಿನಿಮಾಗಳಲ್ಲೂ ಕೂಡ ಅವರು ನಟಿಸಿದ್ದರು. ವರುಣ್ ಧವನ್ ನಾಯಕತ್ವದ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವರೊಂದು ಪಾತ್ರ ಮಾಡಿದ್ದರು. ಏಕ್ತಾ ಕಪೂರ್ ನಿರ್ಮಾಣದ ‘ಬ್ರೋಕನ್ ಬಟ್ ಬ್ಯೂಟಿಫುಲ್ 3’ ವೆಬ್ ಸಿರೀಸ್ನಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಈ ವರ್ಷ ಓಟಿಟಿ ಮೂಲಕ ಅದು ರಿಲೀಸ್ ಆಗಿತ್ತು. ಬಣ್ಣದ ಲೋಕದಲ್ಲಿ ಇನ್ನೂ ಹಲವು ವರ್ಷ ಮಿಂಚಬೇಕಾಗಿದ್ದ ಅವರು ಈಗ ಸಾವಿನ ಮನೆ ಸೇರಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥ್ ಶುಕ್ಲಾ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದರು. ಟ್ವಿಟರ್ನಲ್ಲಿ 10 ಲಕ್ಷ ಹಾಗೂ ಇನ್ಸ್ಟಾಗ್ರಾಮ್ನಲ್ಲಿ 36 ಲಕ್ಷ ಜನರು ಅವರನ್ನು ಫಾಲೋ ಮಾಡುತ್ತಿದ್ದರು. ಫಿಟ್ನೆಸ್ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು. ಪಾಸಿಟಿವ್ ಆಲೋಚನೆಗಳಿರುವ ಪೋಸ್ಟ್ಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದರು. ಇಂಥ ನಟ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿರುವುದು ಎಲ್ಲರಿಗೂ ಶಾಕ್ ನೀಡಿದೆ.
ಬಿಗ್ ಬಾಸ್ ಸೀಸನ್ 13ರಲ್ಲಿ ಸಿದ್ಧಾರ್ಥ್ ಜೊತೆ ಸ್ಪರ್ಧಿಸಿದ್ದ ಅನೇಕರು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಿದ್ಧಾರ್ಥ್ ಸಾವಿನ ಬಗ್ಗೆ ಕೆಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ. ಹಾಗಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನು ಬರಬಹುದು ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ:
ಪ್ರಭಾಸ್ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್ನ ಅಸಲಿಯತ್ತು ಇಲ್ಲಿದೆ
Heart Health: ಹೃದಯಾಘಾತ ಮಾತ್ರ ಅಲ್ಲ, ಹೃದಯಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿಂದ ಪಾರಾಗಲು ಸದಾ ಪ್ರಯತ್ನಿಸಿ
Published On - 11:52 am, Thu, 2 September 21