ಬಿಗ್ಬಾಸ್ ಕನ್ನಡ ಸೀಸನ್ 10ರ (Bigg Boss) ಮೊದಲ ನಾಮಿನೇಷನ್ ಪ್ರಕ್ರಿಯೆ ಮಂಗಳವಾರ ನಡೆದಿದೆ. ನಿರೀಕ್ಷೆಯಂತೆಯೇ ನಾಮಿನೇಷನ್ ಬಳಿಕ ಸ್ಪರ್ಧಿಗಳ ನಡುವೆ ಚರ್ಚೆ, ವಾಗ್ವಾದ ಜಗಳ, ದೂರು, ಅಸಮಾಧಾನ, ಸಣ್ಣ ದ್ವೇಷ, ಸಿಟ್ಟುಗಳು ಪ್ರಾರಂಭವಾಗಿವೆ. ಅದರಲ್ಲಿಯೂ ಬಿಗ್ಬಾಸ್ ಮನೆಯಲ್ಲಿ ಶಿವ-ಸತಿ ಪರಸ್ಪರ ಜಗಳವಾಡಿದ್ದು ನಾಮಿನೇಷನ್ ಎಪಿಸೋಡ್ನ ಪ್ರಮುಖ ಘಟನೆಗಳಲ್ಲಿ ಒಂದು.
‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ನಿರ್ವಹಿಸುವ ನಟ ವಿನಯ್ ಬಿಗ್ಬಾಸ್ ಪ್ರವೇಶ ಮಾಡಿದ್ದಾರೆ. ಡಯಟ್, ವ್ಯಾಯಾಮ, ಸ್ವಚ್ಛತೆ ಹೀಗೆ ಬಹಳ ಶಿಸ್ತಿನ ವ್ಯಕ್ತಿ ಆಗಿರುವ ವಿನಯ್, ಬಿಗ್ಬಾಸ್ ಮನೆಯ ನಿಯಮಗಳ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಇನ್ನು ಅದೇ ಧಾರಾವಾಹಿಯಲ್ಲಿ ಶಿವನ ಮೊದಲ ಪತ್ನಿ ಸತಿ ಅಥವಾ ದಾಕ್ಷಾಯಿಣಿ ಪಾತ್ರದಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಸಹ ಬಿಗ್ಬಾಸ್ ಪ್ರವೇಶ ಮಾಡಿದ್ದಾರೆ.
ಸಂಗೀತಾ ಅವರಿಗೆ ಮೊದಲ ದಿನ ಕಡಿಮೆ ಜನ ಮತ ಬಂದ ಕಾರಣ ಅವರನ್ನು ಅಸಮರ್ಥ ಎಂದು ಪರಿಗಣಿಸಿ ಅವರಿಗೆ ಪ್ರತ್ಯೇಕ ಬಟ್ಟೆಗಳನ್ನು ನೀಡಿ ಇತರೆ ಸದಸ್ಯರಿಂದ ಭಿನ್ನವಾಗಿ ಪರಿಗಣಿಸಲಾಗಿದೆ. ಸಂಗೀತ ಜೊತೆಗೆ ಇನ್ನೂ ಐದು ಮಂದಿ ಅಸಮರ್ಥರು ಬಿಗ್ಬಾಸ್ ಮನೆಯಲ್ಲಿದ್ದಾರೆ.
ಇದನ್ನೂ ಓದಿ:ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್ಬಾಸ್ ಮನೆಯಲ್ಲಿ ಶುರು ಅಸಲಿ ಆಟ
ಇಂದು ಮನೆಯ ಇತರೆ ಸದಸ್ಯರು ಅಸಮರ್ಥ ಎನಿಸಿಕೊಂಡಿರುವ ಆರು ಸದಸ್ಯರನ್ನು ನಾಮಿನೇಟ್ ಮಾಡಬೇಕಿತ್ತು, ಹರ ಹರ ಮಹದೇವ ನಟ ವಿನಯ್, ಧಾರಾವಾಹಿಯಲ್ಲಿ ತನ್ನ ಪತ್ನಿಯ ಪಾತ್ರ ಅಂದರೆ ಸತಿಯ ಪಾತ್ರ ನಿರ್ವಹಿಸಿರುವ ಸಂಗೀತಾ ಹೆಸರು ಹೇಳಿದರು. ಸಂಗೀತಾ ಸೋಫಾ ಮೇಲೆ ಕೆಲ ಸೆಕೆಂಡ್ಗಳ ಕಾಲ ಕೂತು ಬಿಗ್ಬಾಸ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣವನ್ನು ವಿನಯ್ ನೀಡಿದರು.
ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ ಇದೇ ಕಾರಣಕ್ಕೆ ವಿನಯ್ ಮೇಲೆ ವಾಗ್ವಾದ ನಡೆಸಿ, ನಾನು ಅಥವಾ ಮನೆಯ ಯಾವುದೇ ಸದಸ್ಯರು ನಿಯಮ ಮುರಿದರೆ ಸ್ವತಃ ಬಿಗ್ಬಾಸ್ ಎಚ್ಚರಿಸುತ್ತಾರೆ, ನಿಯಮ ಮುರಿದಿದ್ದೀರಿ ಎಂದು ಹೇಳುತ್ತಾರೆ. ನಾನು ನಿಯಮ ಮುರಿದೆ ಎಂದು ನೀವು ಹೇಗೆ ತೀರ್ಮಾನಿಸಿದಿರಿ, ನಿಮಗೆ ನೀವೇ ಬಿಗ್ಬಾಸ್ ಅಂದುಕೊಂಡಿದ್ದೀರಾ? ಎಂದು ಖಾರವಾಗಿಯೇ ಪ್ರಶ್ನಿಸಿದರು.
ಆರಂಭದಲ್ಲಿ ಮೆದು ಧ್ವನಿಯಲ್ಲಿ ಮಾತನಾಡಿದ ನಟ ವಿನಯ್ ಆ ನಂತರ ಅವರೂ ಸಹ ಧ್ವನಿ ಏರಿಸಿ ಸಂಗೀತಾ ಬಳಿ ಮಾತನಾಡಿದರು. ಕೊನೆಗೆ ಸಂಗೀತಾ, ನಿನ್ನ ನಿಜ ಬಣ್ಣ ತೋರಿಸಿದೆ ಎಂದರೆ, ವಿನಯ್, ನಿನ್ನ ಮೈಮೇಲೆ ಬಣ್ಣವಿದೆ ಅದು ಎಲ್ಲರಿಗೂ ಕಾಣುತ್ತಿದೆ ಎಂದು ಟಾಂಗ್ ನೀಡಿದರು. ವಿನಯ್, ನಟ ಕಾರ್ತಿಕ್ ಅನ್ನು ಸಹ ನಿಯಮ ಉಲ್ಲಂಘಿಸಿದ ಕಾರಣ ನೀಡಿಯೇ ನಾಮಿನೇಟ್ ಮಾಡಿದರು. ಅವರೂ ಸಹ ವಿನಯ್ ಬಳಿ ಕೆಲ ಕಾಲ ವಾಗ್ವಾದ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ